ನಕಲಿ ಬ್ಯಾಂಕ್ ಖಾತೆ ಪ್ರಕರಣ: ಆಸಿಫ್ ಅಲಿ ಝರ್ದಾರಿ, ಸಹೋದರಿ ದೇಶ ತೊರೆಯದಂತೆ ಪಾಕ್ ನ್ಯಾಯಾಲಯ ಆದೇಶ
ಇಸ್ಲಾಮಾಬಾದ್, ಜು.9: ನಕಲಿ ಬ್ಯಾಂಕ್ ಖಾತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಸಹಮುಖ್ಯಸ್ಥ ಆಸಿಫ್ ಅಲಿ ಝರ್ದಾರಿ ಹಾಗೂ ಅವರ ಸಹೋದರಿ ಫರ್ಯಲ್ ತಲ್ಪುರ್ ದೇಶ ಬಿಟ್ಟು ತೆರಳದಂತೆ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಸೂಚಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಝರ್ದಾರಿ ಸೇರಿದಂತೆ 20 ಮಂದಿಯ ಹೆಸರನ್ನು ಸೂಚಿಸಿರುವ ಮುಖ್ಯ ನ್ಯಾಯಾಧೀಶ ಸಾಕಿಬ್ ನಿಸಾರ್ ಅವರೆಲ್ಲರೂ ದೇಶ ತೊರೆಯದಂತೆ ನಿರ್ಬಂಧ ಹೇರಿದ್ದಾರೆ. ಪ್ರಕರಣ ವಿಚಾರಣೆಯು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿದ ನ್ಯಾಯಾಧೀಶರು ಈ ಸೂಚನೆಯನ್ನು ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜುಲೈ 12ರಂದು ಸರ್ವೋಚ್ಚ ನ್ಯಾಯಾಲಯವು ಏಳು ನಕಲಿ ಬ್ಯಾಂಕ್ ಖಾತೆದಾರರು ಹಾಗೂ ಹದಿಮೂರು ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ಪೈಕಿ, ಝರ್ದಾರಿ, ತಲ್ಪುರ್, ತಾರಿಕ್ ಸುಲ್ತಾನ್, ಎರುಮ್ ಅಕೀಲ್, ಮುಹಮ್ಮದ್ ಅಶ್ರಫ್ ಹಾಗೂ ಮುಹಮ್ಮದ್ ಇಕ್ಬಾಲ್ ಹಾಗೂ ಇತರರು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು.
ನಾಸಿರ್ ಅಬ್ದುಲ್ಲಾ, ಅನ್ಸಾರಿ ಶುಗರ್ ಮಿಲ್ಸ್, ಒಮನಿ ಪಾಲಿಮಾರ್ ಪ್ಯಾಕೇಜೆಸ್, ಪಾಕ್ ಎಥನಾಲ್ ಪ್ರೈ. ಲಿ., ಚಂಬರ್ ಶುಗರ್ ಮಿಲ್ಸ್, ಆ್ಯಗ್ರೊ ಫಾರ್ಮ್ ತಟ್ಟ, ಝರ್ದಾರಿ ಗ್ರೂಪ್, ಪಾರ್ಥೆನಾನ್ ಪ್ರೈ.ಲಿ., ಎ ವನ್ ಇಂಟರ್ನ್ಯಾಶನಲ್, ಲಕ್ಕಿ ಇಂಟರ್ನ್ಯಾಶನಲ್, ಲೋಜಿಸ್ಟಿಕ್ ಟ್ರೇಡಿಂಗ್, ರಾಯಲ್ ಇಂಟರ್ನ್ಯಾಶನಲ್ ಮತ್ತು ಅಮೀರ್ ಅಸೋಸಿಯೇಟ್ಸ್, ಇವುಗಳು ಈ ಪ್ರಕರಣದಲ್ಲಿ ಫಲಾನುಭವಿಸಲಾಗಿವೆ. ಶುಕ್ರವಾರದಂದು ಝರ್ದಾರಿಯ ಆಪ್ತ, ಸೆಂಟ್ರಲ್ ಡೆಪಾಸಿಟರಿ ಕಂಪೆನಿ (ಸಿಡಿಸಿ)ಯ ಮುಖ್ಯಸ್ಥ ಹಾಗೂ ಸಮ್ಮಿಟ್ ಬ್ಯಾಂಕ್‌ನ ಉಪಾಧ್ಯಕ್ಷ ಹುಸೇನ್ ಲವೈಯನ್ನು ತನಿಖಾ ತಂಡ ವಶಕ್ಕೆ ಪಡೆದುಕೊಂಡಿತ್ತು. ಲವೈ ಹಾಗೂ ಅವರ ಸಹವರ್ತಿಗಳು ಸಮ್ಮಿಟ್ ಬ್ಯಾಂಕ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಪಾಕಿಸ್ತಾನ್ ಲಿ., ನಲ್ಲಿ 29 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ.