ಭಾರತದ ಜೊತೆ ದ್ವಿಪಕ್ಷೀಯ ವ್ಯಾಪಾರ ವಿಸ್ತರಣೆ: ಕೊರಿಯ ಅಧ್ಯಕ್ಷ
ಹೊಸದಿಲ್ಲಿ, ಜು.9: ಎರಡು ದೇಶಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಭಾರತದ ಜೊತೆ ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸಲಾಗುವುದು ಎಂದು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೆ-ಇನ್ ಸೋಮವಾರ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಭಾರತ-ಕೊರಿಯ ವ್ಯವಹಾರ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮೂನ್, ಸಮಗ್ರ ಆರ್ಥಿಕ ಜೊತೆಗಾರಿಕೆ ಒಪ್ಪಂದ (ಸಿಇಪಿಎ)ದ ಮುಂದುವರಿಸುವಿಕೆ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಜೊತೆಗಾರಿಕೆ (ಆರ್‌ಸಿಇಪಿ) ಒಪ್ಪಂದದ ಚರ್ಚೆ ಶೀಘ್ರದಲ್ಲೇ ಅಂತ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಎರಡು ದೇಶಗಳ ಮಧ್ಯೆ 20 ಬಿಲಿಯನ್ ಡಾಲರ್ ವ್ಯಾಪಾರ ನಡೆದಿತ್ತು. ಇದು ದೊಡ್ಡ ಮೊತ್ತವಾದರೂ ನಮ್ಮ ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಮೂನ್ ತಿಳಿಸಿದ್ದಾರೆ. ಈ ವೇಳೆ ಮೂನ್ ಜೊತೆಗಿದ್ದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್ ಪ್ರಭು, ಸಿಇಪಿಎಯನ್ನು ಅಪ್‌ಗ್ರೇಡ್ ಮಾಡುವ ಕುರಿತು ಕೊರಿಯನ್ ಸಚಿವ ಕಿಮ್ ಹ್ಯುನ್-ಚೊಂಗ್ ಜೊತೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ. ಭಾರತ ಮತ್ತು ಕೊರಿಯ ಜೊತೆಯಾಗಿ ನಾಲ್ಕನೇ ಕೈಗಾರಿಕ ಕ್ರಾಂತಿಯನ್ನು ಉಂಟು ಮಾಡಬಹುದು ಎಂದು ಅಭಿಪ್ರಾಯಿಸಿದ ಮೂನ್, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಫ್ಯೂಚರ್ ವಿಷನ್ ಟೆಕ್ನಾಲಜಿ ಗ್ರೂಪ್ ಅನ್ನು ರಚಿಸುವ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕುವುದಾಗಿ ತಿಳಿಸಿದ್ದಾರೆ. ಹಲವಾರು ಕೊರಿಯನ್ ಕಂಪೆನಿಗಳು ಭಾರತದಲ್ಲಿ ಬೃಹತ್ ಮಟ್ಟದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಲು ಉತ್ಸಾಹಿತವಾಗಿವೆ, ಮುಖ್ಯವಾಗಿ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಇವುಗಳು ತಮ್ಮ ಕಾಣಿಕೆಯನ್ನು ನೀಡಲು ಬಯಸಿವೆ ಎಂದು ಮೂನ್ ತಿಳಿಸಿದ್ದಾರೆ. ಸದ್ಯ 500 ಕೊರಿಯನ್ ಕಂಪೆನಿಗಳು ಭಾರತದಲ್ಲಿ ಕಾರ್ಯಾಚರಿಸುತ್ತಿದ್ದು ಮೇಕ್ ಇನ್ ಇಂಡಿಯ ಅಭಿಯಾನದಲ್ಲಿ ಕೊರಿಯ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.