ಉಪ್ಪಳದ ಅಪಘಾತದಲ್ಲಿ ಐದು ಮಂದಿ ಮೃತ್ಯು: ಅಜ್ಜಿನಡ್ಕ ಮನೆಯಲ್ಲಿ ಮಡುಗಟ್ಟಿದ ಶೋಕ
ಉಳ್ಳಾಲ, ಜು. 9: ಕೇರಳದ ಪಾಲಕ್ಕಾಡ್‌ನಲ್ಲಿ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ಆ ಕುಟುಂಬ ಮನೆಯ ಕಡೆ ವಾಪಸ್ಸಾಗುತ್ತಿತ್ತು. ಇನ್ನೇನು ಕೆಲವೇ ನಿಮಿಷದಲ್ಲಿ ಕುಟುಂಬ ಮನೆಗೆ ತಲುಪಬೇಕೆನ್ನುವಷ್ಟರಲ್ಲಿ ಇವರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದು ಕುಟುಂಬದ ಐದು ಮಂದಿಯ ಜೀವವನ್ನು ಕಸಿದುಕೊಂಡಿದೆ. ವರ್ಷದ ಹಿಂದೆಯಷ್ಟೇ ಬೀಫಾತಿಮ್ಮ ಅವರ ಇಬ್ಬರು ಅಳಿಯಂದಿರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಘಟನೆ ನಡೆದು ವರ್ಷವಾಗಿ ನೋವು ಮರೆಯುವ ಮುನ್ನವೇ ಇದೀಗ ಐದು ಮಂದಿ ಮೃತಪಟ್ಟಿರುವುದು ಇಡೀ ಕುಟುಂಬಕ್ಕೇ ಆಘಾತ ನೀಡಿದೆ.
ಉಪ್ಪಳ ನಯಾಬಝಾರಿನಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಲಾರಿ ಮತ್ತು ತೂಫಾನ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಕೆ.ಸಿ ರೋಡ್ ಅಜ್ಜಿನಡ್ಕ ನಿವಾಸಿ ಬಿಫಾತಿಮ (67), ಅವರ ಪುತ್ರಿ ಜೆಪ್ಪು ನಿವಾಸಿ ನಸೀಮಾ (38), ಇನ್ನೋರ್ವ ಪುತ್ರಿ ಸೌದಾ ಎಂಬವರ ಪತಿ ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಮುಸ್ತಾಕ್ (41), ಮೊಮ್ಮಗಳು ಉಳ್ಳಾಲ ಮುಕ್ಕಚ್ಚೇರಿಯವರೇ ಆಗಿರುವ ಆಸ್ಮಾ (30) ಹಾಗೂ ಅವರ ಪತಿ ಇಮ್ತಿಯಾಝ್ (35) ದಾರುಣವಾಗಿ ಮೃತಪಟ್ಟವರು.
ಮೃತ ಬೀಫಾತಿಮ ಅವರ ಪುತ್ರಿ ಸೌದಾ, ಸೌದಾರ ಪುತ್ರ ಫವಾಝ್ (13) ಹಾಗೂ ಮೃತ ನಸೀಮಾ ಅವರ ಮಗು ಫಾತಿಮಾ (1) ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಮಕ್ಕಳಾದ ಫಾರಿಷ್, ಶಾಹೀದ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪುತ್ರಿಯ ಗೃಹಪ್ರವೇಶಕ್ಕೆ ತೆರಳಿದ್ದರು
ಕುಟುಂಬದ ಏಳು ಮಂದಿ ಹಿರಿಯರು ಮತ್ತು 11 ಮಂದಿ ಮಕ್ಕಳು ಶನಿವಾರ ರಾತ್ರಿ ಅಜ್ಜಿನಡ್ಕದ ಮನೆಯಿಂದ ಕೇರಳದ ಪಾಲಕ್ಕಾಡ್ ನಲ್ಲಿ ಬೀಪಾತುಮ್ಮ ಅವರ ಕೊನೆಯ ಪುತ್ರಿ ರುಖಿಯಾ ಅವರ ಗೃಹಪ್ರವೇಶಕ್ಕೆ ಜೀಪಿನಲ್ಲಿ ತೆರಳಿದ್ದರು. ಸಮಾರಂಭವನ್ನು ಮುಗಿಸಿದ ಮಂದಿ ಪಾಲಕ್ಕಾಡ್ ನಿಂದ ರವಿವಾರ ಸಂಜೆ 7 ಗಂಟೆ ಹೊತ್ತಿಗೆ ಹೊರಟು ಸೋಮವಾರ ಬೆಳಗ್ಗೆ 7 ಗಂಟೆಗೆ ಮನೆಗೆ ತಲುಪುವವರಿದ್ದರು.
ಸಾಮಣಿಗೆಯಲ್ಲಿ ವಾಸವಿದ್ದ ಕುಟಂಬ
ಮೋನು ಬ್ಯಾರಿಯವರ ಪತ್ನಿ ಬಿಫಾತುಮ್ಮ ಅವರ ಕುಟುಂಬ ಕಳೆದ ಹಲವಾರು ವರ್ಷಗಳ ಹಿಂದೆ ಅಸೈಗೋಳಿ ಸಮೀಪದ ಸಾಮಣಿಗೆಯಲ್ಲಿ ವಾಸವಾಗಿತ್ತು. ಬಳಿಕ ಕೆಸಿರೋಡ್ ಸಮೀಪದ ಅಜ್ಜಿನಡ್ಕದಲ್ಲಿ ಮನೆ ಮಾಡಿ ವಾಸವಾಗಿತ್ತು. ಬೀಫಾತಿಮ್ಮ ಅವರಿಗೆ 8 ಮಕ್ಕಳು, ಈ ಪೈಕಿ ಮೂವರು ಪುತ್ರರು ಹಾಗೂ 5 ಮಂದಿ ಪುತ್ರಿಯರು. ವಾಹನದಲ್ಲಿ 9 ಮಂದಿ ಮಕ್ಕಳು ಶಾಲೆಗೆ ಹೋಗುವವರಾಗಿದ್ದರು. ಸೋಮವಾರ ಮಕ್ಕಳಿಗೆ ಶಾಲೆಯಿರುವ ಹಿನ್ನೆಲೆಯಲ್ಲಿ ದೂರದ ಪಾಲಕ್ಕಾಡಿಗೆ ತೆರಳಿ ಸಮಾರಂಭದ ದಿನದಂದೇ ವಾಪಸ್ಸಾಗಿದ್ದರು. ಈ ಪೈಕಿ ಮೂರು ಹಾಲುಣಿಸುವ ಮಕ್ಕಳೂ ಇದ್ದರು ಎಂದು ತಿಳಿದು ಬಂದಿದೆ.
ಸ್ನೇಹಿತನ ಜೀಪಿನಲ್ಲಿ ತೆರಳಿದ್ದರು
ಅಪಘಾತದಲ್ಲಿ ಮೃತರಾದವರಲ್ಲಿ ಇಮ್ತಿಯಾಝ್ ಮತ್ತು ಮುಸ್ತಾಕ್ ಇಬ್ಬರು ಉಳ್ಳಾಲದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ. ಶಾಲಾ ಮಕ್ಕಳನ್ನು ಕರೆತರುವ ವಾಹನದಲ್ಲಿಯೂ ದುಡಿಯುತಿದ್ದರು. ತಲಪಾಡಿಯಿಂದ ಪಾಲಕ್ಕಾಡಿಗೆ 338 ಕಿ.ಮೀ ಕ್ರಮಿಸಲು ಇರುವುದರಿಂದ ಇಬ್ಬರು ಹಂಚಿ ವಾಹನವನ್ನು ಚಲಾಯಿಸುತಿದ್ದರು. ಅಪಘಾತ ಸಂದರ್ಭ ಇಮ್ತಿಯಾಝ್ ವಾಹನ ಚಲಾಯಿಸುತಿದ್ದರೆನ್ನಲಾಗಿದೆ. ಮುಸ್ತಾಕ್ ಮುಂಬದಿ ಸೀಟಿನಲ್ಲೇ ಕುಳಿತಿದ್ದರು. ಮುಸ್ತಾಕ್ ಸ್ನೇಹಿತನ ಜೀಪನ್ನು ಪಡೆದುಕೊಂಡು, ಅದರಲ್ಲಿ ಗೃಹಪ್ರವೇಶಕ್ಕೆ ಹೋಗಿದ್ದರು.
ಕಲ್ಲಾಪಿನಲ್ಲಿ ಧಪನ
ಮಂಗಲ್ಪಾಡಿ ಸಿ.ಎಚ್.ಸಿ. ಆಸ್ಪತ್ರೆಯಲ್ಲಿ ಐದು ಮೃತದೇಹಗಳನ್ನು ಮಹಜರು ನಡೆಸಿದ ಬಳಿಕ ಸಂಜೆ ವೇಳೆಗೆ ಅಜ್ಜಿನಡ್ಕದಲ್ಲಿರುವ ಬಿಫಾತುಮ್ಮ ಅವರ ಮನೆಗೆ ತರಲಾಯಿತು. ನೂರಾರು ಬಂಧುಮಿತ್ರರು, ಊರಿನ ಮಂದಿ ಜಮಾಯಿಸಿದ್ದು, ಶೋಕ ಮಡುಗಟ್ಟಿತ್ತು. ಐವರ ದಫನ ಕಾರ್ಯವೂ ಕಲ್ಲಾಪು ಪಟ್ಲ ಮಸೀದಿಯಲ್ಲಿ ನಡೆಯಿತು.