×
Ad

ಉ.ಕ. ಜಿಲ್ಲೆಗೆ ಇಸ್ರೇಲ್ ಮಾದರಿಯ ಕೃಷಿ ಉತ್ತೇಜನಕ್ಕೆ ಆದ್ಯತೆ ನೀಡಿರುವುದು ದೊಡ್ಡ ಕೊಡುಗೆ: ಆರ್.ಎನ್.ನಾಯ್ಕ

Update: 2018-07-09 22:33 IST

ಭಟ್ಕಳ, ಜು. 9: ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಮುಖ್ಯ ಮಂತ್ರಿಯಾಗಿ ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್ ಸ್ವಾಗತಾರ್ಹವಾಗಿದ್ದು ಕರಾವಳಿ ಜಿಲ್ಲೆಗಳನ್ನು ಲಕ್ಷಕ್ಕೆ ತೆಗೆದುಕೊಂಡಿಲ್ಲ ಎನ್ನುವ ಕೂಗು ಕೇವಲ ವಿರೋಧ ಮಾಡಲಿಕ್ಕೆ ಮಾತ್ರ ಎಂದು ಮಾಜಿ ಸಚಿವ ಆರ್. ಎನ್. ನಾಯ್ಕ ಹೇಳಿದರು.

ಅವರು ಭಟ್ಕಳದಲ್ಲಿ ಸುದ್ದಿಗಾರರಂದಿಗೆ ಮಾತನಾಡುತ್ತಿದ್ದರು. ಸಮ್ಮಿಶ್ರ ಸರಕಾರದಲ್ಲಿ ಬಜೆಟ್ ಮಂಡನೆ ಸುಲಭದ ಕೆಲಸವಾಗಿರಲಿಲ್ಲ. ಉತ್ತರ ಕನ್ನಡ ಜಿಲ್ಲೆಗೆ ಇಸ್ರೇಲ್ ಮಾದರಿಯ ಕೃಷಿ ಉತ್ತೇಜನಕ್ಕೆ ಆದ್ಯತೆ ನೀಡಿರುವುದು ದೊಡ್ಡ ಕೊಡುಗೆಯಾಗಿದೆ. ಇನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಈ ಹಿಂದಿನ ಕಾಂಗ್ರೆಸ್ ಸರಕಾರ ನೀಡಿದ ಕೊಡುಗೆಯನ್ನೇ ಮುಂದುವರಿಸಲಾಗಿದೆ ಹೀಗಿರುವಲ್ಲಿ ಇವರು ಕೊಡುಗೆಯನ್ನು ಕೊಟ್ಟಿಲ್ಲ ಎಂದು ಬೊಬ್ಬೆ ಹಾಕುವುದು ಸರಿಯಲ್ಲ. ಕಳೆದ ನಾಲ್ಕು ವರ್ಷಗಳಿಂದ ಕರಾವಳಿ ಜಿಲ್ಲೆಯ ಮೂರು ಸಂಸದರು ಕೇಂದ್ರ ಸರಕಾರದ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಏನು ಕೊಡುಗೆಯನ್ನು ಕೊಡಿಸಿದ್ದಾರೆ ಎನ್ನುವುದನ್ನು ಜನತೆಗೆ ಸ್ಪ್ಟಪಡಿಸಲಿ ಎಂದೂ ಸವಾಲು ಹಾಕಿದರು.

ರಾಜ್ಯದ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರು ಬ್ರಾಹ್ಮಣ ನಿಗಮ ಸ್ಥಾಪಿಸಿ ಅದಕ್ಕೆ ಅನುದಾನ ನೀಡಿಕೆಯಲ್ಲಿ ಸ್ವಲ್ಪ ಎಡವಿದ್ದಾರೆ. ಇನ್ನೂ ಹೆಚ್ಚಿನ ಅನುದಾನ ನೀಡಬೇಕಾಗಿದ್ದು ಬ್ರಾಹ್ಮಣ ಸಮಾಜ ಉತ್ತಮ ಸಂಸ್ಕಾರವಂತ ಸಮಾಜವಾಗಿದ್ದು ಅವರ ಎಳಿಗೆಗೆ ನೀಡಿದ ಸಹಕಾರ ಸ್ವಾಗತಾರ್ಹವಾಗಿದೆ. ಆದರೆ ಶಂಕರಾಚಾರ್ಯರ ಜಯಂತಿ ಆಚರಣೆಗೆ ಮುಂದಾಗಿರುವುದು ಸರಿಯಲ್ಲ, ಕಾರಣ ಶಂಕರಾಚಾರ್ಯರು ಅಂದೇ ವರ್ಣಬೇಧವನ್ನು ತೊಡೆದು ಹಾಕಬೇಕಾಗಿದ್ದರೂ ಸಹ ಇನ್ನೂ ಜೀವಂತ ಇಟ್ಟಿದ್ದಾರೆ ಎಂದರು. ರೈತರ ಸಾಲಾ ಮನ್ನಾ ಬಗ್ಗೆ ಸಮಾಧಾನ ತಂದಿಲ್ಲ ಎಂದ ಅವರು ಪಡಿತರ ಧಾನ್ಯವನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಸಿರುವುದು ಸ್ವಾಗತಾರ್ಹ ಕ್ರಮ. ರಾಜ್ಯದಲ್ಲಿನ ಎಕರೆಗಟ್ಟಲೆ ಜಮೀನು ಹೊಂದಿದವರೂ ಕೂಡಾ ಪಡಿತರ ಪಡೆಯುತ್ತಾರೆ. ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿದರೆ ಅವರಿಗೆ ಸಾಕಾಗುವಷ್ಟು ಧಾನ್ಯ ದೊರೆಯುತ್ತದೆ, ಜಮೀನುದಾರರಿಗೂ ರೇಶನ್ ಕೊಡುವುದು ಸರಿಯಲ್ಲ ಎಂದರು.

ಕೇಂದ್ರದಲ್ಲಿ ಕಳೆದ 25-30 ವರ್ಷಗಳಿಂದ ಸಂಸದರಾಗಿದ್ದ ಅನಂತ ಕುಮಾರ ಹೆಗಡೆ ಅವರಿಗೆ ಇಲ್ಲಿನ ಜನರ ಸಮಸ್ಯೆ ಬಗೆಹರಿಯುವುದು ಬೇಡವಾಗಿದೆ. ಅವರಿಗೆ ಇಲ್ಲಿನ ಅರಣ್ಯ ಅತಿಕ್ರಮಣದಾರರ ಕುರಿತು ಕಿಂಚಿತ್ತೂ ಮಾಹಿತಿಯಿಲ್ಲ, ಕಾರಣ ಅವರಿಗೆ ವಿದ್ಯಾಭ್ಯಾಸದ ಕೊರತೆ ಇದೆ ಎಂದು ಹೇಳಿದ ಆರ್. ಎನ್. ನಾಯ್ಕ ಕೇಂದ್ರ ಸರಕಾರವೇ ಲೋಕ ಸಭೆಯ ಎದುರು ಸರಕಾರಿ ಬಿಲ್ ಮಂಡಿಸಿ ಅತಿಕ್ರಮಣದಾರರ ಮೂರು ತಲೆಮಾರಿನ ಬದಲಿಗೆ 25 ವರ್ಷ ಮತ್ತು ಅರಣ್ಯ ಅನುಸರಿಸಿಕೊಂಡು ಇದ್ದವರಿಗೆ ಮಂಜೂರಿ ಮಾಡಬೇಕು ಎನ್ನುವ ಬಿಲ್ ಪಾಸ್ ಮಾಡಿದರೆ ಯಾವುದೇ ತೊಂದರೆ ಇಲ್ಲ.

ಸರಕಾರ ಮಾಡದಿದ್ದರೆ ಅನಂತ ಕುಮಾರ್ ಹೆಗಡೆಯವರೇ ಖಾಸಗಿ ಬಿಲ್ ವಿದೇಯಕದಡಿಯಲ್ಲಿ ಒಂದು ಮನವಿಯನ್ನು ಸ್ಪೀಕರ್‌ಗೆ ನೀಡಿ ಲೋಕಸಭೆಯ ಮುಂದೆ ಬಂದರೆ ಕೂಡಾ ಚರ್ಚೆಯಾಗುತ್ತಿತ್ತು. ಇದ್ಯಾವದನ್ನು ಮಾಡದೇ ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಅನಂತಕುಮಾರ್ ಹೆಗಡೆಗೆ ವಿದ್ಯೆ ಇಲ್ಲದಿರುವುದೇ ಅವರು ಇತರರಿಗೆ ಗೌರವ ಕೊಡುವುದನ್ನು ಕಲಿತಿಲ್ಲ, ಬ್ರಾಹ್ಮಣ ವರ್ಗದಲ್ಲಿ ಹುಟ್ಟಿ ಬೆಳೆದ ಅವರು ಕನಿಷ್ಟ ಬೇರೆಯವರಿಗೆ ಗೌರವ ಕೊಡುವುದನ್ನಾದರೂ ರೂಢಿಸಿಕೊಳ್ಳಬೇಕಿತ್ತು ಎಂದ ಅರ್. ಎನ್. ನಾಯ್ಕ ಅನಂತಕಮಾರ್ ಹೆಗಡೆ ಎಂದೂ ಬ್ರಷ್ಟಾಚಾರಕ್ಕೆ ಕೈ ಹಾಕಿದವರಲ್ಲ, ಅದರಲ್ಲಿ ಆತ ಪ್ರಾಮಾಣಿಕ ಎಂದರು.

ನಾನು ಬ್ರಾಹ್ಮಣರನ್ನು ಕಂಡು ಸಂಸ್ಕಾರವನ್ನು ಬೆಳೆಸಿಕೊಂಡೆ ಆದರೆ ಈ ಬ್ರಾಹ್ಮಣನಿಗೆ ಸಂಸ್ಕಾರವೇ ಇಲ್ಲ: ಆರ್.ಎನ್.ನಾಯ್ಕ

ಅಕ್ಕಪಕ್ಕ ವಾಸಿಸುತ್ತಿರುವ ಬ್ರಾಹ್ಮಣ ಕುಟುಂಬವನ್ನು ನೋಡಿ ಸಂಸ್ಕಾರವನ್ನು ನಾನು ಬೆಳೆಸಿಕೊಂಡಿದ್ದರೆ ನಮ್ಮ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಮಂತ್ರಿ ಅನಂತ್ ಕುಮಾರ್ ಹೆಗಡೆ ಹುಟ್ಟು ಬ್ರಾಹ್ಮಣನಾದರೂ ಸಂಸ್ಕಾರವನ್ನು ಮಾರಿಕೊಂಡಿದ್ದಾರೆ ಎಂದು ಬಿಜೆಪಿ ಮಾಜಿ ಮುಖಂಡ ಹಾಗೂ ಮಾಜಿ ಸಚಿವ ಆರ್.ಎನ್.ನಾಯ್ಕ ಆರೋಪಿಸಿದ್ದಾರೆ.

ಮನುವಾದಕ್ಕೆ ಜೋತುಬಿದ್ದಿರುವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುವ ಮಾತನಾಡಿ, ಈ ದೇಶದ ಅಸಂಖ್ಯ ಹಿಂದೂ, ಮುಸ್ಲಿಮ, ಕ್ರೈಸ್ತ ಹಾಗೂ ದಲಿತರನ್ನು ಮನುವಾದಿಗಳನ್ನಾಗಿ ಮಾಡಲು ಬಯಸುತ್ತಿದ್ದಾರೆ. ಮನುಸ್ಮೃತಿಯಲ್ಲಿ ಹಿಂದೂ ವಿರೋಧಿ, ಮಹಿಳಾ ವಿರೋಧಿ, ಮನುಷ್ಯ ವಿರೋಧಿ ಎಂದು ಆಧಾರ ಸಹಿತವಾಗಿ ಪತ್ರಕರ್ತರ ಮುಂದಿಟ್ಟ ಅವರು ಇಂತಹ ಹಿಂದೂತ್ವ ನಮಗೆ ಬೇಕಾ ? ಎಂದು ಪ್ರಶ್ನಿಸಿದರು.

ಮನುಸ್ಮೃತಿಯೊಂದು ಅಪ್ಪಟ ಸುಳ್ಳು, ವೈಜ್ಞಾನಿಕ ಆಧಾರವಿಲ್ಲದ್ದು, ಇದು ಕೇವಲ ಬ್ರಹ್ಮಣರ ಉದ್ಧಾರಕ್ಕಾಗಿ ಬರೆಯಲಾಗಿದೆಯೇ ಹೊರತು ಇತರ ಸಮುದಾಯಗಳನ್ನು ತನ್ನ ಕಾಲಾಳಾಗಿ ಕಾಣುತ್ತದೆ. ನ್ಯಾಯಾದಾನ ಮಾಡುವ ಹಕ್ಕು ಕೇವಲ ಬ್ರಾಹ್ಮಣಿಗೆ ಮಾತ್ರ ನೀಡಿದ ಮನುಸ್ಮೃತಿ ಶೂದ್ರನಾದವನು ಎಷ್ಟೆ ತಿಳುವಳಿಕೆ ಇದ್ದರೂ ನ್ಯಾಯಾಧೀಶನ ಹುದ್ದೆಗೆ ಆರ್ಹನಲ್ಲ ಎಂದು ಹೇಳುತ್ತದೆ. ಆದ್ದರಿಂದಲೇ ಶೇ.5%ರಷ್ಟಿರುವ ಬ್ರಾಹ್ಮಣರು ಶೇ.78% ನ್ಯಾಯಾಂಗದ ಉನ್ನತ ಹುದ್ದೆಯಲ್ಲಿದ್ದಾರೆ. ಕಳೆದ 6 ವರ್ಷದಿಂದ ಒಬ್ಬನೇ ಒಬ್ಬ ದಲಿತ ನ್ಯಾಯಾಧೀಶನನ್ನು ಸುಪ್ರೀಮ್ ಕೋರ್ಟ ಗೆ ಉನ್ನತಿಕರಿಸಿಲ್ಲ. ಮನುವಾದಿ ಅನಂತ್ ಹೆಗಡೆ ಇಂತಹ ಪರಿಸ್ಥಿತಿಯನ್ನು ದೇಶದಲ್ಲಿ ನಿರ್ಮಾಣ ಮಾಡಬಂುಸುತ್ತಿದ್ದಾರೆ ಎಂದು ಆರೋಪಿಸಿದರು.

ತ್ರಿವಳಿ ತಲಾಖ್ ಕುರಿತಂತೆ ಮುಸ್ಲಿಮರನ್ನು ಹೀಯಾಳಿಸುವ ಮನುವಾದಿ ಅನಂತ್ ಕುಮಾರ್ ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದು ಹೇಳುತ್ತ, ಇಂತಹ ಅನಾಗರಿಕ, ಮನುಷ್ಯ ವಿರೋಧಿ, ಮಹಿಳಾ ವಿರೋಧಿ ಮನುಸ್ಮೃತಿ ಆಧಾರಿತ ಸಂವಿಧಾನ ಹೇರಲು ಹೊರಟಿರುವುದು ಯಾವ ನ್ಯಾಯಾ ? ಇದಕ್ಕೆ ಮುಸ್ಲಿಮರು ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News