ರೈಲುಗಳಲ್ಲಿ ಸಿಸಿಟಿವಿ ಅಳವಡಿಕೆ: 2,500 ಕೋ. ರೂ. ಸಾಲ ಪಡೆಯಲು ನಿರ್ಧಾರ

Update: 2018-07-09 17:16 GMT

ಹೊಸದಿಲ್ಲಿ, ಜು.9: ದೇಶದಾದ್ಯಂತದ ರೈಲ್ವೇ ಜಾಲದಲ್ಲಿ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ ರೂಪಿಸುವ ಯೋಜನೆಯನ್ವಯ ಎಲ್ಲಾ ರೈಲು ನಿಲ್ದಾಣ ಹಾಗೂ ಬೋಗಿಗಳಲ್ಲಿ ಸಿಸಿಟಿವಿ ಅಳವಡಿಸಲು ರೈಲ್ವೇ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಐಆರ್‌ಎಫ್‌ಸಿಯಿಂದ 2,500 ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಿದೆ. ನಿರ್ಭಯಾ ನಿಧಿಯಡಿ ವಿತ್ತ ಸಚಿವಾಲಯದಿಂದ ಹೆಚ್ಚುವರಿ ಅನುದಾನ ಪಡೆಯಲು ನಡೆಸಿದ ಪ್ರಯತ್ನ ವಿಫಲವಾದ ಬಳಿಕ ಇಂಡಿಯನ್ ರೈಲ್ವೇಸ್ ಫೈನಾನ್ಸ್ ಕಾರ್ಪೊರೇಶನ್(ಐಆರ್‌ಎಫ್‌ಸಿ) ಮೂಲಕ ಸಾಲ ಪಡೆಯಲು ಇಲಾಖೆ ನಿರ್ಧರಿಸಿದೆ.

ಸಿಸಿಟಿವಿ ಯೋಜನೆಗೆ ಒಟ್ಟು 3,000 ಕೋಟಿ ರೂ. ವೆಚ್ಚವಾಗುತ್ತದೆ. ಇದರಲ್ಲಿ 500 ಕೋಟಿ ರೂ. ಮೊತ್ತವನ್ನು ನಿರ್ಭಯ ನಿಧಿಯಡಿ ವಿತ್ತ ಸಚಿವಾಲಯ ಒದಗಿಸಿದೆ. ಈಗಾಗಲೇ 436 ಸ್ಟೇಷನ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಇನ್ನೂ 547 ಸ್ಟೇಷನ್‌ಗಳಲ್ಲಿ ಈ ವರ್ಷ ಸಿಸಿಟಿವಿ ಅಳವಡಿಸಲಾಗುವುದು ಎಂದು ರೈಲ್ವೇ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇಯ ಆಸ್ತಿಗಳಿಗೆ ಹೆಚ್ಚಿನ ಭದ್ರತೆ ಹಾಗೂ ಸುರಕ್ಷತೆ ಒದಗಿಸುವ ಸಲುವಾಗಿ 58,276 ಬೋಗಿಗಳಲ್ಲಿ ಹಾಗೂ 5,121 ನಿಲ್ದಾಣಗಳಲ್ಲಿ ಸಿಸಿಟಿವಿ ವ್ಯವಸ್ಥೆಗೊಳಿಸಲು 2018-19ರ ಸಾಲಿನ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.

ಆದರೆ ನಿರ್ಭಯ ನಿಧಿಯಡಿ ವಿತ್ತ ಇಲಾಖೆಯಿಂದ ಹೆಚ್ಚಿನ ಅನುದಾನ ಪಡೆಯಲು ರೈಲ್ವೇ ಇಲಾಖೆ ವಿಫಲವಾಗಿತ್ತು. ಆದ್ದರಿಂದ ಐಆರ್‌ಎಫ್‌ಸಿಯಿಂದ ಸಾಲ ಪಡೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಎಸಿ ಬೋಗಿಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಆ ಬಳಿಕ ಉಳಿದ ಬೋಗಿಗಳನ್ನು ಈ ವ್ಯಾಪ್ತಿಗೆ ತರಲಾಗುತ್ತದೆ. ಪ್ರತೀ ಬೋಗಿಯೂ ಎಂಟು ಸಿಸಿಟಿವಿ ಹೊಂದಿರುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News