ಸುಳ್ಯ: ಮಾಜಿ ಸಚಿವ ಮೊಹಿದಿನ್ ರಿಗೆ ಗ್ರೀನ್ ವ್ಯೂ ನಲ್ಲಿ ಶ್ರದ್ಧಾಂಜಲಿ ಸಭೆ
ಸುಳ್ಯ, ಜು. 10: ಬಿ.ಎ. ಮೊಹಿದಿನ್ ಅಲ್ಪಸಂಖ್ಯಾತರ ಶಿಕ್ಷಣದ ಬಗ್ಗೆ ದಶಕಗಳಿಂದ ಮೌನ ಕ್ರಾಂತಿಯನ್ನು ಉಂಟು ಮಾಡಿದವರು. ಎಲ್ಲದಕ್ಕೂ ಪರಿಹಾರ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣ. ಇದರಿಂದ ವರದಕ್ಷಿಣೆ ಪಿಡುಗು ನಿರ್ಮೂಲನ ಸಾಧ್ಯ ಎಂದು ಪ್ರತಿಪಾದಿಸಿದವರು ಎಂದು ರಾಜ್ಯ ಕೆಪೆಕ್ ನಿರ್ದೇಶಕ ಪಿ.ಎ. ಮಹಮ್ಮದ್ ಹೇಳಿದರು.
ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊಹಿದಿನ್ ನಿಧನಕ್ಕೆ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ. ಐ. ಇಸ್ಮಾಯಿಲ್ ವಹಿಸಿದ್ದರು.
ದ.ಕ. ಜಿಲ್ಲಾ ವಕ್ಪ್ ಸಮಿತಿ ಸದಸ್ಯ ಕೆ.ಯಂ. ಮುಸ್ತಫ ಮಾತನಾಡಿ ತನ್ನ ಜೀವನದ ಕೊನೆಯ ಉಸಿರಿನವರೇಗೂ ಅಧಿಕಾರಕ್ಕಾಗಿ ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳದೇ ಬದುಕಿನ ವ್ಯಕ್ತಿ ಬಿ.ಎ. ಮೊಹಿದಿನ್ ಎಂದು ಹೇಳಿದರು. ಪ್ರಾರಂಭದಲ್ಲಿ ಸುಳ್ಯ ತಾಲೂಕು ಮದರಸ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರ್ ದುಆ ನೆರವೇರಿಸಿ ಕುರ್‌ಆನ್ ಪಠಿಸಿ ಮೃತರಿಗೆ ಪ್ರಾರ್ಥಿಸಿದರು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಹಾಜಿ ಮುಹಿಯುದ್ದೀನ್ ಫೇನ್ಸಿ, ಮುಖ್ಯೋಪಾಧ್ಯಾಯರಾದ ಅಮರನಾಥ ಬಿ.ಪಿ., ಸುಳ್ಯ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಹಿರಿಯ ಶಿಕ್ಷಕರುಗಳಾದ ಜಯಂತಿ, ಧನ್ಯ, ಪ್ರತಿಭಾ, ಎಸ್. ಆಳ್ವ, ರಮ್ಯ, ಪ್ರಸನ್ನ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಮಂಜುನಾಥ್ ಸ್ವಾಗತಿಸಿ, ರಂಜಿತ್ ವಂದಸಿದರು. ಮೃತರ ಆತ್ಮಶಾಂತಿಗಾಗಿ ಮೌನ ಪ್ರಾರ್ಥನೆ ಆಚರಿಸಲಾಯಿತು.