×
Ad

ಬಿ.ಎ.ಮೊಹಿದಿನ್ ನಿಧನ: ಬಂಟ್ವಾಳ ತಾಪಂನ ಸಾಮಾನ್ಯ ಸಭೆ ಅರ್ಧಕ್ಕೆ ಮೊಟಕು

Update: 2018-07-10 19:09 IST

ಬಂಟ್ವಾಳ, ಜು. 10: ಬಂಟ್ವಾಳ ತಾಪಂನ ಸಾಮಾನ್ಯ ಸಭೆಯ ಆರ್ಧ ಭಾಗದಷ್ಟು ಕಲಾಪ ಮುಗಿದ ಬಳಿಕ ಸಭೆಗಾಗಮಿಸಿದ ಹಿರಿಯ ಸದಸ್ಯರೊಬ್ಬರ ಸಲಹೆಯಂತೆ ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರ ನಿಧನದ ಹಿನ್ನಲೆಯಲ್ಲಿ ಸಭೆಯನ್ನು ಆರ್ಧಕ್ಕೆ ಮೊಟಕುಗೊಳಿಸಲಾಯಿತು.

ಮಂಗಳವಾರ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆ ನಡೆದಿದ್ದು, ಕಾರ್ಯಸೂಚಿಯಂತೆ ತಾಪಂನ ಬಜೆಟ್‌ಗೆ ಸಂಬಂಧಿಸಿ ಕ್ರಿಯಾಯೋಜನೆಗೆ ಸದಸ್ಯರಿಂದ ಅನುಮೋದನೆ ಪಡೆದು ಸಹಿತ ಸುಮಾರು ಮುಕ್ಕಾಲಂಶದಷ್ಟು ಸಭಾ ಕಲಾಪವು ಮುಗಿದಿತ್ತು. ಇಲಾಖಾವಾರು ಚರ್ಚೆ ಆರಂಭವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿ ತಾಲೂಕಿನಲ್ಲಿ ಪ್ರಾಕೃತಿ ವಿಕೋಪದಿಂದ ಉಂಟಾದ ನಷ್ಟದ ಕುರಿತು ಗಂಭೀರ ಚರ್ಚೆ ನಡೆಯುತಿತ್ತು. ಇದೇ ವೇಳೆ ಸಭೆಗಾಗಮಿಸಿದ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿಯವರು ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರು ನಿಧನರಾಗಿರುವ ಹಿನ್ನಲೆಯಲ್ಲಿ ಸಂತಾಪ ಸೂಚಕವಾಗಿ ಸಭೆಯನ್ನು ಮುಂದೂಡುವಂತೆ ಕೋರಿದರು.

ಬಿ.ಎ.ಮೊಹಿದಿನ್ ಅವರು ಮಾಜಿ ಸಚಿವರಲ್ಲದೆ ಬಂಟ್ವಾಳ ಕ್ಷೇತ್ರದ ಶಾಸಕರು ಕೂಡ ಆದವರು, ಈ ಕ್ಷೇತ್ರದ ಅಭಿವೃದ್ಧಿಯಲ್ಲಿ ಅವರ ಪಾತ್ರವು ಅಪಾರವಿದೆ. ಒಬ್ಬ ಹಿರಿಯ ರಾಜಕೀಯ ದುರೀಣರಾಗಿದ್ದಾರೆ. ಹಾಗಾಗಿ ಸಭೆಯನ್ನು ಮುಂದೂಡುವಂತೆ ಸಭೆ ಆರಂಭಕ್ಕೆ ಮುನ್ನವೇ ಅಧ್ಯಕ್ಷ, ಉಪಾಧ್ಯಕ್ಷರನ್ನು ದೂರವಾಣಿ ಮೂಲಕ ಕೋರಿದ್ದೆ ಎಂದು ಸಭೆಯ ಗಮನಸೆಳೆದರು. ಈ ಹಂತದಲ್ಲಿ ಒಂದು ಕ್ಷಣ ಸಭೆ ಸ್ಥಬ್ದಗೊಂಡಿತು.

ಆಗ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ ಅವರು ಮೃತರ ಬಗ್ಗೆ ಗುಣಗಾನ ಮಾಡಿದರೆ, ಸದಸ್ಯ ರಮೇಶ್ ಕುಡ್ಮೇರು ಅವರು ಮೃತರಿಗೆ ಸಭೆ ಆರಂಭಕ್ಕೆ ಮುನ್ನ ಸಂತಾಪ ಸೂಚಿಸಲಾಗಿದೆ ಎಂದರು. ಇದರಿಂದ ಅಸಮಾಧಾನಗೊಂಡ ಸದಸ್ಯ ಉಸ್ಮಾನ್ ಕರೋಪಾಡಿಯವರು, ವಿಧಾನಸಭೆ, ಲೋಕಸಭೆಯಲ್ಲೂ ಸದಸ್ಯರು ನಿಧನರಾದರೆ ಸಂತಾಪ ಸೂಚಿಸಿ ಸಭೆಯನ್ನು ಮುಂದೂಡಲಾಗುತ್ತದೆ. ಇಲ್ಲಿ ಸಾಧ್ಯವಿಲ್ಲವೇ ?, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳುತ್ತಾ, ಸಭೆಯಿಂದ ಹೊರನಡೆದರು.

ಇತ್ತ ಸ್ಥಾಯಿ ಸಮಿತಿ ಅಧ್ಯಕ್ಷೆ ಅವರು ಆಡಿದ ಮಾತಿಗೆ ಆಡಳಿತ ಪಕ್ಷದ ಸದಸ್ಯ ಹೈದರ್ ಕೈರಂಗಳ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗವು ನಡೆಯಿತು. ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್ ಮದ್ಯಪ್ರವೇಶಿಸಿ ಈ ವಿಚಾರದಲ್ಲಿ ಚರ್ಚೆಯ ಅಗತ್ಯವಿಲ್ಲ, ಅಧ್ಯಕ್ಷರು ಮತ್ತು ಕಾರ್ಯ ನಿರ್ವಹಣಾಧಿಕಾರಿಯವರು ಪರಸ್ಪರ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದರು.

ಜಿಪಂ ಸದಸ್ಯ ತುಂಗಪ್ಪ ಬಂಗೇರ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಬಳಿಕ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಹಣಾಧಿಕಾರಿಯವರು ಅಲ್ಲಿಯೇ ಚರ್ಚಿಸಿ ಸಭೆಯನ್ನು ಮುಂದೂಡುವ ಕುರಿತು ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಪ್ರಕಟಿಸಿದರು. ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News