×
Ad

ರಜಿನಿಕಾಂತ್ ಪತ್ನಿ ವಿಚಾರಣೆ ಎದುರಿಸಬೇಕು: ಸುಪ್ರೀಂ ಸೂಚನೆ

Update: 2018-07-10 20:09 IST

ಚೆನ್ನೈ, ಜು.10: ರಜಿನಿಕಾಂತ್ ಅವರ ಸಿನೆಮಾ ‘ಕೊಚ್ಚಾಡಿಯನ್‌’ಗೆ ಸಂಬಂಧಿಸಿದ ಜಾಹೀರಾತು ಪ್ರಕಟಿಸಿದ ಸಂಸ್ಥೆಗೆ ಪಾವತಿಸಬೇಕಿದ್ದ ಸುಮಾರು 6.20 ಕೋಟಿ ರೂ. ಮೊತ್ತವನ್ನು ರಜನೀಕಾಂತ್ ಪತ್ನಿ ಲತಾ ಪಾವತಿಸದೆ ವಂಚಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಲತಾ ವಿಚಾರಣೆ ಎದುರಿಸಬೇಕು ಎಂದು ಸುಪ್ರಿಂಕೋರ್ಟ್ ತಿಳಿಸಿದೆ.

  ಲತಾ ವಿರುದ್ಧ ಆರೋಪಪಟ್ಟಿ ದಾಖಲಿಸಿಕೊಂಡ ಬಳಿಕ ಅವರ ವಿರುದ್ಧ ವಿಚಾರಣೆ ಆರಂಭವಾಗಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. 2014ರಲ್ಲಿ ರಜನೀಕಾಂತ್ ಪುತ್ರಿ ಸೌಂದರ್ಯ ನಿರ್ದೇಶಿಸಿದ್ದ, ರಜಿನಿಕಾಂತ್, ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿದ್ದ ‘ಕೊಚ್ಚಾಡಿಯನ್’ ಸಿನೆಮದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕಾಗಿ ‘ಮೀಡಿಯಾ ವನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಲಿ.’ ಸಂಸ್ಥೆಯ ಹೆಸರಲ್ಲಿ 10 ಕೋಟಿ ರೂ. ಸಾಲ ಪಡೆಯಲಾಗಿತ್ತು. ರಜಿನಿ ಪತ್ನಿ ಲತಾ ಈ ಸಂಸ್ಥೆಯ ಓರ್ವ ನಿರ್ದೇಶಕಿಯಾಗಿದ್ದಾರೆ. ಸಿನೆಮದ ಜಾಹೀರಾತು ಪ್ರಕಟಿಸಿದ್ದ ಆ್ಯಡ್ ಬ್ಯೂರೋ ಸಂಸ್ಥೆ ತನಗೆ 6.20 ಕೋಟಿ ರೂ. ಹಣ ಬರಲು ಬಾಕಿಯಿದೆ ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಆದರೆ ಇದು ವಂಚನೆಯ ಪ್ರಕರಣವಲ್ಲ, ಒಪ್ಪಂದ ಉಲ್ಲಂಘಿಸಿದ ಪ್ರಕರಣವಾಗಿದೆ ಎಂದು ತಿಳಿಸಿದ್ದ ಹೈಕೋರ್ಟ್ ಅರ್ಜಿಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಹೈಕೋರ್ಟ್‌ನ ಆದೇಶವನ್ನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್, ಪ್ರಕರಣವನ್ನು ಆರಂಭಿಕ ಹಂತದಲ್ಲೇ ಹೈಕೋರ್ಟ್ ರದ್ದುಗೊಳಿಸುವಂತಿಲ್ಲ ಎಂದು ಸೂಚಿಸಿತ್ತು.

ಮೂರು ತಿಂಗಳೊಳಗೆ ಬಾಕಿ ಪಾವತಿಸುವಂತೆ ಕಳೆದ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಲತಾ ರಜನೀಕಾಂತ್‌ಗೆ ಸೂಚಿಸಿದಾಗ ಸಾಲ ಪಾವತಿಸುವುದಾಗಿ ಲತಾ ಆಶ್ವಾಸನೆ ನೀಡಿದ್ದರು. ಆದರೆ ಇನ್ನೂ ಸಾಲ ತೀರಿಸದ ಬಗ್ಗೆ ಕಳೆದ ವಾರ ಲತಾರನ್ನು ತರಾಟೆಗೆತ್ತಿಕೊಂಡ ಸುಪ್ರೀಂಕೋರ್ಟ್, ಸಾಲ ಪಾವತಿಸದಿದ್ದರೆ ವಿಚಾರಣೆ ಎದುರಿಸಲು ಸಿದ್ಧರಾಗಿ ಎಂದು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News