ಮೂಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿತ

Update: 2018-07-10 16:31 GMT

ಕಾಪು, ಜು. 10: ಮೂಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಸಿತ ಉಂಟಾಗಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ನೀರಿನ ಒರೆತ ಹೆಚ್ಚಾಗಿ ಕಾಪು ಠಾಣೆ ವ್ಯಾಪ್ತಿಯ ಮೂಳೂರು ಮಸೀದಿ ದ್ವಾರದ ಬಳಿಯ ಹೆದ್ದಾರಿ ಕುಸಿದಿದೆ. ಹೆದ್ದಾರಿ 66ರ ಪಶ್ಚಿಮ ಭಾಗದ ರಸ್ತೆ ಸುಮಾರು 5 ಅಡಿ ಸುತ್ತಳತೆ ಹಾಗೂ ಎರಡು ಅಡಿಯಷ್ಟು ಕುಸಿದಿದ್ದು, ಸಂಜೆಯ ವೇಳೆಗೆ ಘಟನೆ ಬೆಳಕಿಗೆ ಬಂದಿತು. ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುವ ವಾಹನ ಸವಾರರು ಹೆದ್ದಾರಿ ಕುಸಿದಿರುವುದನ್ನು ಕಂಡು ಆತಂಕಿತರಾದರು.

ಎರಡು ವರ್ಷಗಳ ಹಿಂದೆಯಷ್ಟೇ ಈ ಹೆದ್ದಾರಿ ಕಾಮಗಾರಿ ಪೂರ್ಣಕಂಡಿತ್ತು. ಈ ಭಾಗದಲ್ಲಿ ಮನೆ ಹಾಗೂ ಪಕ್ಕದಲ್ಲಿ ಬಾವಿ ಇತ್ತು. ಹೆದ್ದಾರಿ ಭೂ ಸ್ವಾಧೀನಗೊಳಿಸಿ ಚತುಷ್ಪಥ ಹೆದ್ದಾರಿ ಕಾಮಗಾರಿಯ ವೇಳೆ ಬಾವಿಗೆ  ಮಣ್ಣು ತುಂಬಲಾಗಿತ್ತು. ಬಾವಿ ಇದ್ದ ಜಾಗದಲ್ಲೇ ಕುಸಿತ ಕಂಡಿದ್ದು, ಸಮರ್ಪಕವಾಗಿ ಬಾವಿಗೆ ಮಣ್ಣು ತುಂಬದೆ ಇರುವುದೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಘಟನೆಯಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕಾಪು ಪೊಲೀಸರು ಹೆದ್ದಾರಿಯಲ್ಲಿ ಕುಸಿತ ಕಂಡ ಜಾಗದಲ್ಲಿ ಬ್ಯಾರಿಕೇಡ್ ಇಡಲಾಗಿದ್ದು, ಸ್ಥಳೀಯರ ಸಹಕಾರದಿಂದ ಪೊಲೀಸರು ಹೆದ್ದಾರಿಯ ಬದಿಯಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News