×
Ad

ಜಾರ್ಖಂಡ್ ನಲ್ಲಿ ನಕ್ಸಲರಿಂದ ಬಾಂಬ್ ಸ್ಫೋಟ; ಕರ್ನಾಟಕದ ಇಬ್ಬರು ಯೋಧರು ಹುತಾತ್ಮ

Update: 2018-07-10 22:20 IST
ಸಾಂದರ್ಭಿಕ ಚಿತ್ರ

ರಾಯಪುರ (ಚತ್ತೀಸ್‌ಗಢ), ಜು. 10: ರಾಯಪುರದಿಂದ 200 ಕಿ.ಮೀ. ದಕ್ಷಿಣದಲ್ಲಿರುವ ಕಂಕಾರ್ ಜಿಲ್ಲೆಯ ಚೋಟೆ ಬೆಥಿಯಾದಲ್ಲಿ ನಿಷೇಧಿತ ಸಿಪಿಐ (ಮಾವೊವಾದಿ) ಸೋಮವಾರ ಸಂಜೆ ನೆಲಬಾಂಬ್ ಸ್ಫೋಟಿಸಿದ ಪರಿಣಾಮ ಗಡಿ ಭದ್ರತಾ ಪಡೆಯ, ಕರ್ನಾಟಕ ಮೂಲದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮಾವೋವಾದಿಗಳ ನಿಗ್ರಹಕ್ಕೆ ಕಂಕೇರ್ ಜಿಲ್ಲೆಯಾದ್ಯಂತ 8 ತಂಡ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಶೋಧ ಕಾರ್ಯಾಚರಣೆ ನಡೆಸುತ್ತಿದ್ದ 13 ಬೈಕ್‌ಗಳನ್ನು ಗುರಿಯಾಗಿರಿಸಿ ನಕ್ಸಲೀಯರು ದಾಳಿ ನಡೆಸಿದ್ದಾರೆ. ಆದರೆ, ನಾಲ್ಕನೇ ಬೈಕ್ ಮಾತ್ರ ಈ ಸ್ಫೋಟಕ್ಕೆ ಸಿಲುಕಿದೆ. ಗಂಭೀರ ಗಾಯಗೊಂಡ ಇಬ್ಬರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟ ಸಂಭವಿಸಿದ ಕೂಡಲೇ ಮಾವೋವಾದಿಗಳು ಗುಂಡಿನ ದಾಳಿ ಕೂಡ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ದಾಳಿ ನಡೆಸಿದರು ಎಂದು ಕಂಕೇರ್‌ನ ಪೊಲೀಸ್ ಅಧೀಕ್ಷಕ ಕೆ.ಎಲ್. ಧ್ರುವ ಹೇಳಿದ್ದಾರೆ.

ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಬಿಎಸ್‌ಎಫ್ ಯೋಧರನ್ನು ಕರ್ನಾಟಕದ ಕಾರವಾರದ ಕೋಮರಪಂಥವಾಡದ ವಿಜಯಾನಂದ ಸುರೇಶ್ ನಾಯ್ಕ (29) ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಗಾ ಗ್ರಾಮದ ಸಂತೋಷ ಲಕ್ಷ್ಮಣ ಗುರವ (28) ಎಂದು ಗುರುತಿಸಲಾಗಿದೆ.

ವಿಜಯಾನಂದ ಸುರೇಶ್ ನಾಯ್ಕ

ವಿಜಯಾನಂದ ಸುರೇಶ್ ನಾಯ್ಕ ಬಿಎಸ್‌ಎಫ್‌ನ 121ನೇ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಣಿಪುರದ ಇಂಫಾಲದಲ್ಲಿ ತರಬೇತಿ ಪಡೆದ ಅವರು ಪಶ್ಚಿಮಬಂಗಾಳ, ಹೈದರಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರ ತಂದೆ ಕಂದಾಯ ಇಲಾಖೆಯಲ್ಲಿ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಾರವಾರದಲ್ಲಿಯೇ ಹುಟ್ಟಿ ಬೆಳೆದು ಶಿಕ್ಷಣ ಪೂರೈಸಿದ್ದ ಅವರು 2014ರಲ್ಲಿ ಗಡಿ ಭದ್ರತಾ ಪಡೆಗೆ ಸೇರಿದ್ದರು. ಅವರಿಗೆ ತಂದೆ, ತಾಯಿ, ಸಹೋದರ, ಸಹೋದರಿ ಇದ್ದಾರೆ.

ಸಂತೋಷ ಲಕ್ಷ್ಮಣ ಗುರವ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಗಾ ಗ್ರಾಮದ ಸಂತೋಷ ಲಕ್ಷ್ಮಣ ಗುರವ ಐದು ವರ್ಷಗಳ ಹಿಂದೆ ಗಡಿ ಭದ್ರತಾ ಪಡೆಗೆ ಸೇರಿದ್ದರು. ಅವರಿಗೆ ತಾಯಿ, ಪತ್ನಿ ಹಾಗೂ ಮೂವರು ಸಹೋದರರು ಇದ್ದಾರೆ.

ಇಬ್ಬರ ಹುತಾತ್ಮ ಯೋಧರ ಮೃತದೇಹಗಳನ್ನು ಬುಧವಾರ ಬೆಳಗ್ಗೆ ಅವರವರ ಗ್ರಾಮಕ್ಕೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News