ಕಾಪು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಆರೋಪಿಗಳು ಸೆರೆ
ಕಾಪು, ಜು.10: ಮಾದಕ ವಸ್ತು ಸೇವನೆ ಮಾಡುತ್ತಿದ್ದವರ ದಸ್ತಗಿರಿಗೆ ತೆರಳಿದ ಕಾಪು ಪೊಲೀಸ್ ಠಾಣಾ ಎಎಸ್ಸೈ ಚಂದ್ರಶೇಖರ್ ಅವರನ್ನು ಆರೋಪಿಗಳು ದೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಮಲ್ಲಾರು ಗ್ರಾಮದ ಗರಡಿ ರಸ್ತೆಯ ಮಕರ ಪ್ಲಾಟ್ ಎಂಬಲ್ಲಿ ಜು.9ರಂದು ನಡೆದಿದೆ.
ಮಾದಕ ವಸ್ತು ಸೇವಿಸುತ್ತಿರುವ ಕುರಿತು ಬಂದ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ವಿಚಾರಿಸಿದ ಎಎಸ್ಸೈ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಿಗೆ ಮದ್ಯ ಸೇವಿಸಿದ್ದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದರೆನ್ನಲಾಗಿದೆ. ಅವರಲ್ಲಿ ಚಂದ್ರಕಾಂತ ಕೋಟ್ಯಾನ್(37) ಎಂಬಾತನನ್ನು ಬೈಕಿನಲ್ಲಿ ಠಾಣೆಗೆ ಕರೆದುಕೊಂಡು ಹೋಗುತ್ತಿರುವಾಗ ಕೊಪ್ಪಲಂಗಡಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಸಚೀಂದ್ರ ಪೂಜಾರಿ (35), ಅಶ್ವಿತ್(26), ಲೀಲಾಧರ ಅಂಚನ್(60) ಎಂಬವರು ಬೈಕನ್ನು ಅಡ್ಡಗಟ್ಟಿ ಎಎಸ್ಸೈ ಚಂದ್ರಶೇಖರ್ ಅವರ ಮೈಗೆ ಕೈ ಹಾಕಿ ದೂಡಿ ಚಂದ್ರಕಾಂತ ಕೋಟ್ಯಾನ್‌ನ್ನು ಕರೆದುಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.