ಸಿಗಡಿ ಕೃಷಿ ಕೆರೆಗೆ ಕಿಡಿಗೇಡಿಗಳಿಂದ ವಿಷ: 28 ಲಕ್ಷ ರೂ. ನಷ್ಟ
ಗಂಗೊಳ್ಳಿ, ಜು.10: ಹೊಸಾಡು ಗ್ರಾಮದ ಅರಾಟೆ ಎಂಬಲ್ಲಿ ಸಿಗಡಿ ಕೃಷಿಯ ಕೆರೆಗೆ ಕಿಡಿಗೇಡಿಗಳು ವಿಷ ಪದಾರ್ಥ ಹಾಕಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಘಟನೆ ಜು.9ರಂದು ನಸುಕಿನ ವೇಳೆ ನಡೆದಿದೆ.
ಸೇನಾಪುರ ಗ್ರಾಮದ ನರಸಿಂಹ ಮೊಗವೀರ ಬಂಟ್ವಾಡಿ ಎಂಬವರು ಕಳೆದ 12 ವರ್ಷಗಳಿಂದ ಸಿಗಡಿ ಕೃಷಿ ಮಾಡಿಕೊಂಡಿದ್ದು, ಅರಾಟೆಯಲ್ಲಿರುವ ಕುಟುಂಬದ ಒಂದುವರೆ ಎಕ್ರೆ ಜಾಗದಲ್ಲಿ ಹಾಗೂ ಅರಾಟೆಯ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಬಂಧಪಟ್ಟ 1.60ಎಕರೆ ಜಾಗದಲ್ಲಿರುವ ಕೆರೆಯಲ್ಲಿ ಸಿಗಡಿ ಕೃಷಿ ಮಾಡಿದ್ದು, ಸಿಗಡಿ ಬೆಳೆದು ಮಾರಾಟದ ಹಂತಕ್ಕೆ ಬಂದಿತ್ತೆನ್ನಲಾಗಿದೆ.
ಜು.9ರಂದು ಮಧ್ಯರಾತ್ರಿಯಿಂದ ಮುಂಜಾನೆಯ ಮಧ್ಯಾವಧಿಯಲ್ಲಿ ಕಿಡಿ ಗೇಡಿಗಳು ನರಸಿಂಹ ಮೊಗವೀರರ ಮೇಲಿನ ದ್ವೇಷ ಸಾಧನೆಗಾಗಿ ಈ ಎರಡೂ ಸಿಗಡಿ ಕೆರೆಗೆ ವಿಷ ಪದಾರ್ಥವನ್ನು ಹಾಕಿದರೆನ್ನಲಾಗಿದೆ. ಇದರ ಪರಿಣಾಮ ಬೆಳವಣಿಗೆಗೆ ಬಂದ 28 ಲಕ್ಷ ರೂ. ಮೌಲ್ಯದ ಸಿಗಡಿ ಮೃತಪಟ್ಟು ನಷ್ಠ ಉಂಟಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.