×
Ad

ಉರುಳಿ ಬಿದ್ದ ಮರ, ವಿದ್ಯುತ್ ಕಂಬ: ಕೂದಲೆಳೆಯಲ್ಲಿ ಪಾರಾದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

Update: 2018-07-10 23:07 IST

ಪುತ್ತೂರು, ಜು. 10: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಗೆ ಬೃಹತ್ ಗಾತ್ರದ ಮರ ಹಾಗೂ ತಂತಿ ಕಂಬ ಉರುಳಿ ಬಿದ್ದಿದ್ದು, ಅವರು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಕೇಂದ್ರಿಕೃತ ತರಬೇತಿ ಸಂಯೋಜಕರೂ ಆಗಿರುವ ಮಹಮ್ಮದ್ ಬಡಗನ್ನೂರು ಅವರು ಬೆಳ್ತಂಗಡಿಯಲ್ಲಿ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನಡೆಯುತ್ತಿದ್ದ ಪಂಚಾಯತ್ ಪಿಡಿಒ ಮತ್ತು ಕ್ಲಾಸ್1 ಕಾರ್ಯದರ್ಶಿಗಳ ತರಬೇತಿಗೆ ತನ್ನ ಕಾರಿನಲ್ಲಿ ತೆರಳಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಅವರ ಪುತ್ರ ಜುನೈದ್ ಅನ್ವರ್ ಜೊತೆಗಿದ್ದರು.

ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ಘಟನೆ ನಡೆದಿದ್ದು, ಕೇವಲ 2 ಮೀಟರ್ ಅಂತರದಲ್ಲಿ ಮರ ಉರುಳಿ ಬೀಳುತ್ತಿರುವುದನ್ನು ಗಮನಿಸಿದ ಅವರ ಪುತ್ರ ಜುನೈದ್  ಈ ಬಗ್ಗೆ ಗಮನ ಸೆಳೆಯುತ್ತಿದ್ದಂತೆಯೇ ಮಹಮ್ಮದ್ ಅವರು ತಕ್ಷಣವೇ ಕಾರಿನ ಬ್ರೇಕ್ ಹಾಕಿ ಬಲಕ್ಕೆ ತಿರುಗಿಸಿದರು. ಈ ವೇಳೆಗೆ ಕಾರಿನ ಮುಂಭಾಗದಿಂದ ಮರ ಹಾಗೂ ಹಿಂಭಾಗದಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಮಧ್ಯದಲ್ಲಿದ್ದ ಮಹಮ್ಮದ್ ಬಡಗನ್ನೂರು ಮತ್ತು ಜುನೈದ್ ಅನ್ವರ್ ಅದೃಷ್ಟವಶಾತ್ ಪಾರಾಗಿದ್ದಾರೆ. ಈ ವೇಳೆ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮಹಮ್ಮದ್ ಬಡಗನ್ನೂರು ಮತ್ತು ಅವರ ಮಗ ಜುನೈದ್‌ ರನ್ನು ಸ್ಥಳೀಯರು ಉಪಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News