ರಾಮರಾಜ್ಯ ಹೇಗೆ ಸ್ಥಾಪಿಸುತ್ತೀರಿ: ಬಿಜೆಪಿಗೆ ಶಿವಸೇನೆ ಪ್ರಶ್ನೆ
ಮುಂಬೈ, ಜು. 10: ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರದ ಘಟನೆಗಳ ಕುರಿತು ಬಿಜೆಪಿ ಶಾಸಕರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಕಾನೂನು ಹಾಗೂ ಸುವ್ಯವಸ್ಥೆ ನಿಯಂತ್ರಣ ತಪ್ಪುತ್ತಿದೆ ಎಂದು ಹೇಳಿದೆ ಹಾಗೂ ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ‘ರಾಮರಾಜ್ಯ’ ಸ್ಥಾಪಿಸಲು ಸಾಧ್ಯವೇ ಎಂದು ಪ್ರಶ್ನಿಸಿದೆ.
ಡಿಸೆಂಬರ್ 2012ರಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ನಡೆದ ಸಂದರ್ಭ ಅಂದು ಪ್ರತಿಪಕ್ಷವಾಗಿದ್ದ ಬಿಜೆಪಿಯ ನಿಲುವು ಬೇರೆಯಾಗಿತ್ತು. ಸರಕಾರ ಬದಲಾಗಿದೆ. ಆದರೆ, ಅತ್ಯಾಚಾರ ನಿಂತಿಲ್ಲ ಎಂದು ಶಿವಸೇನೆ ಹೇಳಿದೆ. ಭಾವನೆಯೊಂದಿಗೆ ಸಂಬಂಧ ಹೊಂದಿದ ಇಂತಹ ವಿಷಯಗಳು ಹಿಂಸಾಚಾರಕ್ಕೆ ಕಾರಣವಾಗುತ್ತಿವೆ ಎಂದು ಹೇಳಿದ ಸೇನೆ, ಚುನಾವಣೆಯಲ್ಲಿ ಜಯ ಗಳಿಸಲು ಇಂತಹ ರಾಜಕೀಯ ಮಾಡಬೇಕು ಎಂದು ಶ್ರೀರಾಮ ಎಂದೂ ಹೇಳಿಲ್ಲ ಎಂದರು.
ಅತ್ಯಾಚಾರವನ್ನು ಸ್ವತಃ ರಾಮ ಕೂಡ ತಡೆಯಲಾರ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಶಾಸಕರ ಹೇಳಿಕೆ ಬಗ್ಗೆ ತರಾಟೆಗೆ ತೆಗೆದುಕೊಂಡಿರುವ ಸೇನೆ, ‘‘ರಾಮರಾಜ್ಯ ಸ್ಥಾಪಿಸುವ ಬಗ್ಗೆ ಬಿಜೆಪಿ ಮಾತನಾಡುತ್ತಿದೆ. ಆದರೆ, ಅದನ್ನು ಮಾಡಲು ಹೇಗೆ ಯೋಜಿಸಲಾಗಿದೆ ಎಂದು ಬಿಜೆಪಿ ಸ್ಪಷ್ಟಪಡಿಸಲಿ. ಉತ್ತರಪ್ರದೇಶ ಸೇರಿದಂತೆ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕಿರುಕುಳ ಹೆಚ್ಚುತ್ತಿವೆ’’ ಎಂದಿದೆ. ‘‘ಇದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುವ ಬದಲಿಗೆ ಬಿಜೆಪಿ, ರಾಮ ಬಂದರೆ ಕೂಡ ಅತ್ಯಾಚಾರವನ್ನು ನಿಲ್ಲಿಸಲಾಗದು ಎಂದು ಹೇಳುತ್ತಿದೆ’’ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಹೇಳಿದೆ.