ಅಡಿಕೆ ಬೆಳೆಗಾರರ ರಕ್ಷಣೆಗೆ ಮೌಲ್ಯವರ್ಧನೆಯ ಒತ್ತು ನೀಡುವುದು ಅಗತ್ಯ

Update: 2018-07-11 15:22 GMT

ಮಂಗಳೂರು, ಜು. 11: ಅಡಿಕೆ ಬೆಳೆಗಾರರನ್ನು ರಕ್ಷಿಸುವುದು ಕ್ಯಾಂಪ್ಕೋದ ಮುಂದಿರುವ ಬಹುದೊಡ್ಡ ಸವಾಲು. ಆ ಸವಾಲನ್ನು ಎದುರಿಸಲು ಕ್ಯಾಂಪ್ಕೋ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಒತ್ತು ನೀಡುವ ಕೆಲಸವನ್ನು ಮಾಡುವುದು ಅತೀ ಅಗತ್ಯ ಎಂದು ನಾಲಂದ ಮಹಾವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿಘ್ನೇಶ್ವರ ವರ್ಮುಡಿ ಸಲಹೆ ನೀಡಿದ್ದಾರೆ.

ಕ್ಯಾಂಪ್ಕೋ ನಿಯಮಿತದ ವತಿಯಿಂದ ಕ್ಯಾಂಪ್ಕೋ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಸ್ಥಾಪನಾ ದಿನದಲ್ಲಿ ಅಡಿಕೆ ಕುರಿತಂತೆ ಮಾತನಾಡುತ್ತಾ ಅವರು ಈ ಸಲಹೆ ನೀಡಿದರು.

ಅಡಿಕೆಯ ಔಷಧೀಯ ಗುಣಗಳನ್ನು ಕ್ರೋಢೀಕರಣಗೊಳಿಸಿ ನಡೆಸಲಾದ ಅಧ್ಯಯನದ ಬಗ್ಗೆ ಸಮರ್ಪಕ ಮಾಹಿತಿಯ ಕೊರತೆಯಿಂದ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಹೇಳಿಕೆಗಳು ಹೆಚ್ಚು ಪ್ರಚಲಿತವಾಗಿವೆ. 2020ರ ವೇಳೆಗೆ ಅಡಿಕೆ ಬೆಳೆಗಾರರ ಮೇಲೆ ತೂಗುಗತ್ತಿ ಬರುವ ಸಂಭವ ಅಧಿಕವಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ಅವಧಿಗೆ ತಂಬಾಕು ನಿಷೇಧದ ಬಗ್ಗೆ ಕಠಿಣ ನಿರ್ಧಾರವಾಗಲಿದೆ. ಅಡಿಕೆಗೆ ತಂಬಾಕು ಜತೆ ಅತೀಜ ದೊಡ್ಡ ಮಾರುಕಟ್ಟೆ ಇರುವುದರಿಂದ ತಂಬಾಕು ನಿಷೇಧದ ಪರಿಣಾಮ ಅಡಿಕೆ ಮೇಲೆಯೂ ಬೀಳುವ ಸಾಧ್ಯತೆ ಅಧಿಕ ಎಂದವರು ವಿಶ್ಲೇಷಿಸಿದರು.

ಅಡಿಕೆಯ ಪರ್ಯಾಯ ಉಪಯೋಗದ ಬಗ್ಗೆ ಉತ್ಪಾದನಾ ಪ್ರದೇಶದಲ್ಲಿ ಇನ್ನೂ ಸಾಕಷ್ಟು ಪ್ರಯತ್ನ ಆಗಿಲ್ಲ. ಗ್ರಾಹಕ ವ್ಯಾಪ್ತಿಯಲ್ಲಿಯೂ ಅಡಿಕೆ ತಿನ್ನುವವರೆಂದರೆ ‘ಗುಜರಿ’ ಎಂಬ ಅರ್ಥದಲ್ಲಿ ಭಾವಿಸಲಾಗುತ್ತದೆ. ಹಾಗಾಗಿ ಅಡಿಕೆಯ ಬದಲಿ ಉತ್ಪನ್ನಗಳ ಬಗ್ಗೆ ಗಮನ ಹರಿಸಿ ಮೌಲ್ಯವರ್ಧನೆಗೆ ಒತ್ತು ನೀಡುವ ಮೂಲಕ ಕ್ಯಾಂಪ್ಕೋ ಅಡಿಕೆ ಬೆಳೆಗಾರರನ್ನು ರಕ್ಷಿಬೇಕು ಎಂದು ಅವರು ಹೇಳಿದರು.

ಅಡಿಕೆ ಬೆಳೆಗಾರನ್ನು ರಕ್ಷಿಸಬೇಕಾದರೆ ಅಡಿಕೆಗೆ ತಗಲಿರುವ ಅಪವಾದಗಳಿಂದ ಹೊರಬರಬೇಕಾಗಿದೆ. ಇದಕ್ಕಾಗಿ ಅಡಿಕೆಯ ಔಷಧೀಯ ಗುಣಗಳ ದಾಖಲೆಗಳನ್ನು ಒಗ್ಗೂಡಿಸಿ, ಸಂಶೋಧಕರನ್ನು ಒಟ್ಟಾಗಿಸಿ ಉಲ್ಲೇಖ ಪುಸ್ತಕವನ್ನು ತಯಾರಿಸಿಕೊಂಡು ನ್ಯಾಯಾಲಯದಲ್ಲಿ ಮುಂದುವರಿಯಬೇು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಯಾಂಪ್ಕೋ ಸ್ಥಾಪಕ ಅಧ್ಯಕ್ಷ ಎಲ್. ತಿಮ್ಮಪ್ಪ ಹೆಗ್ಗಡೆ ಮಾತನಾಡಿ, ಕ್ಯಾಂಪ್ಕೋ ಬೆಳೆದು ಬಂದ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷ ಎಸ್.ಆರ್. ಸತೀಶ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ. ಸ್ವಾಗತಿಸಿದರು. ವೇದಿಕೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಸುೇಶ್ ಭಂಡಾರಿ ಎಂ. ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News