ಮುಡಾ: ವಸತಿ ಬಡಾವಣೆ ಪ್ರಸ್ತಾವ ಪರಿಶೀಲನೆ ಹಂತದಲ್ಲಿದೆ - ಸಚಿವ ಖಾದರ್

Update: 2018-07-11 11:42 GMT

ಮಂಗಳೂರು, ಜು.11: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಿವೇಶನಗಳನ್ನು ರಚಿಸಲು 46.85 ಎಕರೆ ಜಮೀನಿನಲ್ಲಿ ಸುಮಾರು 592 ನಿವೇಶನಗಳುಳ್ಳ ವಸತಿ ಬಡಾವಣೆ ಯೋಜನಾ ನಕ್ಷೆಯ ಪ್ರಸ್ತಾವ ಸರಕಾರದ ಪರಿಶೀಲನೆಯ ಹಂತದಲ್ಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ತಿಳಿದ್ದಾರೆ.

ವಿಧಾನಮಂಡಲದಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಮುಡಾದಲ್ಲಿ ನಿವೇಶನಗಳನ್ನು ರಚಿಸಲು 2010-11ನೇ ಸಾಲಿನಲ್ಲಿ ಚೇಳ್ಯಾರು ಮತ್ತು ಮಧ್ಯ ಗ್ರಾಮಗಳಲ್ಲಿ 72 ಎಕರೆ 83.50 ಸೆಂಟ್ಸ್ ಜಮೀನನ್ನು ಖರೀಸಿದ್ದು, 20 ಕೋಟಿ ರೂ. ಭೂಮಾಲಕರಿಗೆ ಪಾವತಿಸಿದೆ. ಖರೀದಿಸಿದ ಒಟ್ಟು ಜಮೀನಿನ 592 ನಿವೇಶನಗಳನ್ನು ಹಂಚಲು ಉದ್ದೇಶಿಸಿದೆ ಎಂದು ತಿಳಿಸಿದರು.

ಜಮೀನು ಖರೀದಿ ಪ್ರಕರಣದ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ/ನೌಕರರ ವಿರುದ್ಧದ ಆರೋಪಗಳ ಕುರಿತು ನಿಯಮಾನುಸಾರ ಕ್ರಮ ಜರುಗಿಸಲು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

'ಮುಡಾ ಖರೀದಿಸಿದ ಭೂಮಿಯನ್ನು ನೋಂದಾಯಿಸಿಕೊಳ್ಳದೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಗಿರುವ ಕೋಟ್ಯಂತರ ರೂ. ನಷ್ಟಕ್ಕೆ ಕೈಗೊಂಡ ಕ್ರಮಗಳೇನು' ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, 70 ಎಕರೆ 90.50 ಸೆಂಟ್ಸ್ ಜಮೀನನ್ನು ಪ್ರಾಧಿಕಾರದ ಹೆಸರಿನಲ್ಲಿ ಆರ್‌ಟಿಸಿ ದಾಖಲಾಗಿದೆ. 1 ಎಕರೆ 93 ಸೆಂಟ್ಸ್ ನೋಂದಣಿಗೆ ಭೂಮಾಲಕರಿಂದ ದಾಖಲೆಗಳನ್ನು ಸಲ್ಲಿಸದೆ ಇರುವುದರಿಂದ ನೋಂದಣಿ ಆಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ಅನಂತ್ ಕಾಮತ್ ಅವರಿಗೆ ನೋಟಿಸ್ ನೀಡಿದ್ದು, ಅವರ ಹಕ್ಕಿನಲ್ಲಿರುವ ಮಧ್ಯ ಗ್ರಾಮದಲ್ಲಿ 21 ಎಕರೆ 02.75 ಸೆಂಟ್ಸ್ ಮತ್ತು ದೇರೆಬೈಲ್ ಗ್ರಾಮದ 44 ಸೆಂಟ್ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಡಮಾನದ ಹಕ್ಕು ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಮೇಲೆ ಮಾದಕ ದ್ರವ್ಯದ ಪರಿಣಾಮ ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ಹತ್ತಿಕ್ಕಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಐವನ್ ಡಿಸೋಜ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಮಾದಕ ದ್ರವ್ಯ ವಿರೋಧಿ ಜಾಥಾ, ಮೆರವಣಿಗೆ ಮಾದಕ ವಿರೋಧಿ ಕಾರ್ಯಾಗಾರ, ಸಭೆಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟ್ಟರ್‌ಗಳ ಮೂಲಕ ಹಾಗೂ ದಿನಪತ್ರಿಕೆ ಮೂಲಕ ಮಾದಕ ವಸ್ತುಗಳ ವಸ್ತುಗಳ ವ್ಯಸನಿಗಳ ಪಾಡು ಹಾಗೂ ಸಮಾಜಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಶಾಲಾ ಕಾಲೇಜುಗಳ ಮಂಡಳಿಯೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಮಾಧಕ ವಸ್ತುಗಳ ಸಾಗಣೆ ಮತ್ತು ಮಾರಾಟದಲ್ಲಿ ಭಾಗಿಯಾಗಿರುವ ವಿದೇಶಿ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ನೀಡಲು ನಿರ್ದೇಶನ ನೀಡಲಾಗಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News