ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ ಸಹೋದರಿಯರನ್ನು ಅತ್ಯಾಚಾರಗೈದ ಆರೋಪ; ಇಬ್ಬರ ಬಂಧನ

Update: 2018-07-11 13:47 GMT

ಬೆಳ್ತಂಗಡಿ, ಜು.11: ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಅತ್ಯಾಚಾರಗೈಯಲಾಗಿದೆ ಎಂದು ಆರೋಪಿಸಲಾಗಿದ್ದು, ಇದಕ್ಕೆ ಸಂಬಂಧಿಸಿ ವೇಣೂರು ಪೋಲೀಸರು ಅತ್ಯಾಚಾರ ಹಾಗೂ ಫೋಕ್ಸೋ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳಾಗಿರುವ ಮಾಳ ನಿವಾಸಿ ಶರತ್ (21) ಹಾಗೂ ಸುಲ್ಕೇರಿ ನಿವಾಸಿ ಪ್ರಕಾಶ್ (23) ಎಂಬವರನ್ನು ವೇಣೂರು ಪೋಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

17 ಹಾಗೂ 15ರ ಹರೆಯದ ಇಬ್ಬರು ಸಹೋದರಿಯರು ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು, ಗೇರುಬೀಜ ಕಾರ್ಖಾನೆಗೆ ಕೆಲಸಕ್ಕೆ ತೆರಳುತ್ತಿದ್ದರು. ದೂರದ ಸಂಬಂಧಿಕರಾಗಿರುವ ಇಬ್ಬರು ಯುವಕರು ಕೂಡ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಈ ಇಬ್ಬರು ಯುವಕರು ಬಾಲಕಿಯರನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬಾಲಕಿಯರ ತಂದೆ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಬಾಲಕಿಯರನ್ನು ಕರೆಸಿಕೊಂಡು ಮಾಹಿತಿ ಪಡೆದಿದ್ದು, ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ತಂದೆ ನೀಡಿರುವ ದೂರಿನಂತೆ ಪೊಲೀಸರು ಅತ್ಯಾಚಾರ ಹಾಗೂ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಹೋದರಿಯರನ್ನು ಚೈಲ್ಡ್‍ಲೈನ್ ವಶಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News