ನೌಕಾಪಡೆ ಮಾಹಿತಿ ಸೋರಿಕೆ ಪ್ರಕರಣ: ನಿವೃತ್ತ ಅಧಿಕಾರಿಗೆ ಏಳು ವರ್ಷ ಜೈಲು

Update: 2018-07-11 13:59 GMT

ಹೊಸದಿಲ್ಲಿ, ಜು.11: 2006ರ ನೇವಿ ವಾರ್ ರೂಮ್ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ನ್ಯಾಯಾಲಯ ಬುಧವಾರ ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ಸಲಾಮ್ ಸಿಂಗ್ ರಾಥೋಡ್‌ಗೆ ಏಳು ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಧಿಕೃತ ರಹಸ್ಯ ಕಾಯ್ದೆ 1923ರ ಸೆಕ್ಷನ್ 3(1)ಸಿ ಅಡಿ ಶಿಕ್ಷೆಯನ್ನು ಪ್ರಕಟಿಸಿದ ವಿಶೇಷ ಸಿಬಿಐ ನ್ಯಾಯಾಧೀಶ ಎಸ್.ಕೆ ಅಗರ್ವಾಲ್, ಪ್ರಕರಣದ ಇನ್ನೊರ್ವ ಆರೋಪಿ ನಿವೃತ್ತ ಕಮಾಂಡರ್ ಜರ್ನೈಲ್ ಸಿಂಗ್ ಕಾಲ್ರಾರನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಿದೆ.

ರಾಥೋಡ್ ಭದ್ರತಾ ಸಚಿವಾಲಯದ ಸ್ವಾಧೀನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಭದ್ರತಾ ಮಧ್ಯವರ್ತಿಯಿಂದ ನಗದು ಮತ್ತು ವಸ್ತುಗಳನ್ನು ಉಡೊಗೊರೆ ರೂಪದಲ್ಲಿ ಪಡೆದುಕೊಂಡಿದ್ದರು. ರಾಥೋಡ್ ನಿವಾಸದಲ್ಲಿ ಶೋಧ ನಡೆಸಿದ ಅಧಿಕಾರಿಗಳಿಗೆ ಭದ್ರತಾ ವಿಭಾಗದ ಅನೇಕ ರಹಸ್ಯ ದಾಖಲೆಗಳು ಸಿಕ್ಕಿದ್ದವು. ಇವುಗಳ ಪೈಕಿ ಮೂರು ಸೂಕ್ಷ್ಮ ದಾಖಲೆಗಳನ್ನು ರಾಥೋಡ್‌ಗೆ ಕಾಲ್ರಾ ನೀಡಿದ್ದರು. ಈ ದಾಖಲೆಗಳನ್ನು ಬೆಂಗಳೂರಿನಲ್ಲಿರುವ ಎಚ್‌ಎಎಲ್ ಕಾರ್ಪೊರೇಟ್ ಕಚೇರಿಗೆ ಕಳುಹಿಸಲು ಕಾಲ್ರಾಗೆ ನೀಡಲಾಗಿತ್ತು. ಆದರೆ ಅವರು ಹಾಗೆ ಮಾಡದೆ ಈ ದಾಖಲೆಗಳನ್ನು ತಮ್ಮಲ್ಲೇ ಉಳಿಸಿ ನಂತರ ರಾಥೋಡ್‌ಗೆ ನೀಡಿದ್ದರು. ಸಿಬಿಐ 2007ರಲ್ಲಿ ರಾಥೋಡ್ ಮತ್ತು ಕಾಲ್ರಾ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿತ್ತು. ಆರೋಪಿಗಳ ನೌಕಾಪಡೆಯ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡುವ ಮೂಲಕ ದೇಶದ ಭದ್ರತೆಗೆ ಅಪಾಯ ತಂದೊಡ್ಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News