​ಜನಸಂಖ್ಯಾ ಸ್ಪೋಟ ನಿಯಂತ್ರಣ ಅಗತ್ಯ:ದಿನಕರ ಬಾಬು

Update: 2018-07-11 14:02 GMT

ಉಡುಪಿ, ಜು.11: ಹೆಚ್ಚುತ್ತಿರುವ ಜನಸಂಖ್ಯೆ ವಿಶ್ವದ ಪ್ರಮುಖ ಸಮಸ್ಯೆಯಾಗಿದ್ದು, ಜನಸಂಖ್ಯಾ ಸ್ಪೋಟದಿಂದಾಗಿ ತಮ್ಮ ದೇಶದ ಸಮಸ್ತ ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಜಗತ್ತಿನ ಹೆಚ್ಚಿನೆಲ್ಲಾ ರಾಷ್ಟ್ರಗಳಿಗೂ ಸಮಸ್ಯೆಯಾಗಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಬುಧವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾ. ಸೇ. ಯೋಜನೆ, ಲಯನ್ಸ್ ಕ್ಲಬ್ ಉಡುಪಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜನಸಂಖ್ಯಾ ಸಮಸ್ಯೆಯಿಂದ ಸರಕಾರಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವುದು ಕಷ್ಟಕರವಾಗಿದೆ. ನಿರುದ್ಯೋಗ ಸೃಷ್ಟಿಯಾಗಿ ದೇಶದ ಯುವ ಸಂಪತ್ತು, ಸಂಪಾದನೆಗಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿವೆ. ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದ್ದು, ಇಲ್ಲಿನ ಯುವ ಸಂಪತ್ತು ಇತರೇ ರಾಷ್ಟ್ರಗಳಿಗಿಂತ ಅಧಿಕವಾಗಿವೆ. ಈ ಯುವ ಸಂಪತ್ತಿನ ಸದ್ಬಳಕೆ ಆಗಬೇಕು ಎಂದರು.
ಇದಕ್ಕಾಗಿ ಜನಸಂಖ್ಯೆಯನ್ನು ನಿಯಂತ್ರಿಸುವುದು ಇಂದಿನ ತುರ್ತು ಅಗತ್ಯ ವಾಗಿದ್ದು, ಕುಟುಂಬ ಯೋಜನಾ ಕ್ರಮಗಳು ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಸೀಮಿತವಾಗದೆ ಎಲ್ಲರೂ ಪಾಲಿಸುವಂತಾಗಬೇಕು ಎಂದವರು ಅಭಿಪ್ರಾಯ ಪಟ್ಟರು. ಜನಸಂಖ್ಯಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದಿನಕರ ಬಾಬು ಬಹುಮಾನ ವಿತರಿಸಿದರು. ಜನಸಂಖ್ಯಾ ನಿಯಂತ್ರಣ ಕುರಿತ ಕರಪತ್ರವನ್ನು ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಡಾ.ಜಿ.ಶಂಕರ್ ಸರಕಾರಿ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಪ್ರಕಾಶ್ ಕ್ರಮಧಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಜ್ ಪ್ರಭು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್,ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಉಪಸ್ಥಿತರಿದ್ದರು. ಡಾ.ರೋಹಿಣಿ ಸ್ವಾಗತಿಸಿದರೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿಜಯಾ ಬಾಯಿ ನಿರೂಪಿಸಿದರು.

ಇದಕ್ಕೆ ಮೊದಲು ಜೋಡುಕಟ್ಟೆಯಿಂದ ನಡೆದ ಜಾಥಾ ಕಾರ್ಯಕ್ರಮವನ್ನು ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉದ್ಘಾಟಿಸಿದರು. ಡಾ.ಜಿ.ಶಂಕರ್ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಜನಸಂಖ್ಯಾ ನಿಯಂತ್ರಣ ಕುರಿತು ಕಿರು ನಾಟಕ ನಡೆಯಿತು.

ಉಡುಪಿ: ಜನಸಂಖ್ಯೆ ಏರಿಕೆ ಶೇ.5.85 ಮಾತ್ರ
ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, 2001ರಲ್ಲಿ ಭಾರತದ ಜನಸಂಖ್ಯೆ 1.02 ಬಿಲಿಯನ್ ಇದ್ದು, 2011ರಲ್ಲಿ 1.21 ಬಿಲಿಯನ್‌ಗೆ ಏರಿಕೆ ಯಾಗಿದೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 5.28 ಕೋಟಿ ಇದ್ದದ್ದು 6.10 ಕೋಟಿಗೆ ಏರಿಕೆಯಾಗಿದೆ. ಉಡುಪಿಯ ಜನಸಂಖ್ಯೆ 11.77 ಲಕ್ಷ ಆಗಿದೆ. ದೇಶದಲ್ಲಿ ಲಿಂಗಾನುಪಾತದ ಪ್ರಮಾಣ 933ರಿಂದ 943ಕ್ಕೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿ 965ರಿಂದ 973ಕ್ಕೆ ಏರಿದೆ. 2011ಕ್ಕೆ ಜನಸಂಖ್ಯಾ ಪ್ರಮಾಣ ಭಾರತದಲ್ಲಿ ಶೇ.17.5 ಏರಿಕೆಯಾಗಿದ್ದು, ಕರ್ನಾಟಕದಲ್ಲಿ ಶೇ.15.6ರಷ್ಟು ಹಾಗೂ ಉಡುಪಿಯಲ್ಲಿ ಶೇ.5.85 ಮಾತ್ರ ಏರಿಕೆಯಾಗಿದೆ. ಕರ್ನಾಟಕದಲ್ಲಿ ಪ್ರತಿ 1000ಕ್ಕೆ 200 ಮಂದಿ 15ರಿಂದ 45 ವಯೋಮಾನದವರಿದ್ದಾರೆ ಎಂದು ವಿವರಿಸಿದರು.

ವಿವಿಧ ರೀತಿಯ ಜನಸಂಖ್ಯಾ ನಿಯಂತ್ರಣ ವಿಧಾನ ಇಂದು ಎಲ್ಲಡೆ ಸುಲಭ ವಾಗಿ ಲಭ್ಯವಿದ್ದು, ಸರಿಯಾದ ವಿಧಾನವನ್ನು ಯೋಚಿಸಿ ಅಳವಡಿಸಿಕೊಳ್ಳುವಂತೆ ಹೇಳಿದ ಡಾ. ರೋಹಿಣಿ, ಜನಸಂಖ್ಯೆ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಮಾತ್ರವಲ್ಲದೇ ಪ್ರತಿಯೊಬ್ಬರೂ ಪಾತ್ರವೂ ಮುಖ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News