ಪ್ಲಾಸ್ಟಿಕ್ ವಿರುದ್ಧ ಗುಲಾಬಿ ಅಭಿಯಾನ

Update: 2018-07-11 14:04 GMT

ಉಡುಪಿ, ಜು.11:ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಯ ಅಪಾಯದ ಬಗ್ಗೆ ಅರಿವು ಮೂಡಿಸಲು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಪಂ ವತಿಯಿಂದ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ 'ಗುಲಾಬಿ ಅಭಿಯಾನ' ಎಂಬ ಕಾರ್ಯಕ್ರಮ ಜು.13ರಿಂದ ನಡೆಯಲಿದೆ.
ಬುಧವಾರ ಜಿಪಂ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಈ ವಿಷಯ ತಿಳಿಸಿದರು.

ಅತಿ ಹೆಚ್ಚು ಪ್ಲಾಸ್ಟಿಕ್ ಬಳಕೆ ಅಂಗಡಿ, ಕಾರ್ಖಾನೆ ಮತ್ತಿತರ ವಾಣಿಜ್ಯ ಸಂಸ್ಥೆಗಳಿಂದ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರತೀ ಪ್ರೌಢಶಾಲೆಯ ವತಿಯಿಂದ ಆಯಾ ಶಾಲಾ ವ್ಯಾಪ್ತಿಯ 15-20 ಅಂಗಡಿ, ಉದ್ದಿಮೆಗಳನ್ನು ಗುರುತಿಸಿ ಆಯಾ ಪ್ರೌಢಶಾಲೆಗಳಿಂದ ತಲಾ 6 ವಿದ್ಯಾರ್ಥಿಗಳ ತಂಡವನ್ನು ರಚಿಸಲಾಗುವುದು. ಈ ತಂಡದಲ್ಲಿ ಒಬ್ಬರು ಶಿಕ್ಷಕರು ಮತ್ತು ಗ್ರಾಪಂ ಸಿಬ್ಬಂದಿಗಳಿರುತ್ತಾರೆ.

ಈ ತಂಡ ಪ್ರತೀ ಅಂಗಡಿಗೆ ಹೋಗಿ ಒಂದು ಗುಲಾಬಿ, ಕರಪತ್ರ ಹಾಗೂ ಸ್ಟಿಕ್ಕರನ್ನು ಅಂಗಡಿ ಮಾಲಕರಿಗೆ ನೀಡಿ ಪ್ಲಾಸ್ಟಿಕ್ ಬಳಸದಿರುವ ಬಗ್ಗೆ ಮನವರಿಕೆ ಮಾಡಲಿದೆ. ಬಳಿಕ ಪ್ರತೀ ಶನಿವಾರದಂದು ತಂಡವು ಅದೇ ಅಂಗಡಿಗೆ ಹೋಗಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಗಮನಹರಿಸಲಿದೆ. ಒಟ್ಟು ಮೂರು ಶನಿವಾರ ಇದು ನಡೆಯಲಿದೆ ಎಂದವರು ತಿಳಿಸಿದರು. ಈ ಅಭಿಯಾನಕ್ಕೆ ಎಲ್ಲಾ ಜನಪ್ರತಿನಿಧಿಗಳು,ಸಾರ್ವಜನಿಕರು ಸಹಕರಿಸಬೇಕು ಎಂದು ನಾಗೇಶ್ ರಾಯ್ಕರ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News