×
Ad

ಕಾಂಗ್ರೆಸ್ ರೈತರನ್ನು ಮತಬ್ಯಾಂಕ್ ಆಗಿ ಬಳಸಿ ವಂಚಿಸಿದೆ: ಮೋದಿ

Update: 2018-07-11 19:34 IST

ಮಲೌಟ್, ಜು.11: ಕಾಂಗ್ರೆಸ್ ರೈತರಿಗೆ ಮೋಸ ಮಾಡಿದೆ ಮತ್ತು ಒಂದು ನಿರ್ದಿಷ್ಟ ಕುಟುಂಬದ ಹಿತಕ್ಕಾಗಿ ರೈತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಖಾರಿಫ್ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಿರುವುದರ ಪರವಾಗಿ ಪಂಜಾಬ್‌ನ ಮಲೌಟ್‌ನಲ್ಲಿ ನಡೆದ ಕಿಸಾನ್ ಕಲ್ಯಾಣ್ ರ್ಯಾಲಿಯಲ್ಲಿ ಮೋದಿ ಈ ಆರೋಪ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅಕಾಲಿದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್, ಕೇಂದ್ರ ಸಚಿವೆ ಹರ್ಸಿಮೃತ್ ಕೌರ್ ಬಾದಲ್ ಸೇರಿದಂತೆ ಶಿರೋಮಣಿ ಅಕಾಲಿದಳ ಹಾಗೂ ಬಿಜೆಪಿಯ ಅನೇಕ ನಾಯಕರು ಭಾಗವಹಿಸಿದ್ದರು. ಸಾಕಷ್ಟು ಶ್ರಮಪಟ್ಟರೂ ರೈತರು ಒಂದು ಸುಖಮಯ ಜೀವನದ ಯೋಚನೆಯನ್ನೂ ಮಾಡಲು ಸಾಧ್ಯವಾಗಿಲ್ಲ. ಈಗಲೂ ಅವರು ಹತಾಶೆ ಮತ್ತು ನಿರಾಶೆಯ ಜೀವನವನ್ನು ನಡೆಸಬೇಕಿದೆ. ಇದಕ್ಕೆ ಕಾರಣ ದಶಕಗಳಿಂದ ದೇಶವನ್ನು ಆಳಿದ ಕಾಂಗ್ರೆಸ್ ನೇತೃತ್ವದ ಸರಕಾರಗಳ ನೀತಿ ವೈಫಲ್ಯವಾಗಿದೆ ಎಂದು ಮೋದಿ ದೂರಿದ್ದಾರೆ.

ಕಾಂಗ್ರೆಸ್‌ಗೆ ಯಾರ ಬಗ್ಗೆಯಾದರೂ ಕಾಳಜಿಯಿದ್ದರೆ ಅದು ಒಂದು ನಿರ್ದಿಷ್ಟ ಕಟುಂಬದ ಮತ್ತು ಅವರನ್ನು ಹೇಗೆ ಖುಷಿಪಡಿಸುವುದು ಎಂಬ ಬಗ್ಗೆ ಮಾತ್ರ ಎಂದು ಪ್ರಧಾನಿ ಕಿಡಿಕಾರಿದ್ದಾರೆ. ಹಲವು ವರ್ಷಗಳಿಂದಲೂ ರೈತರಿಗೆ ತಾವು ಬೆಳೆದ ಬೆಳೆಗೆ ಕೇವಲ ಶೇ.10 ಲಾಭಾಂಶ ಸಿಗುತ್ತಿರುವುದಾದರೂ ಯಾಕೆ ಎಂಬುದು ನನಗೆ ಗೊತ್ತು. ಇದರ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬುದೂ ಗೊತ್ತು. ರೈತರು ಈ ದೇಶದ ಆತ್ಮ, ಅವರು ನಮ್ಮ ಅನ್ನದಾತರು. ಆದರೆ ಕಾಂಗ್ರೆಸ್ ಅವರಿಗೆ ಮೋಸ ಮಾಡಿದೆ ಮತ್ತು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದೆ ಎಂದು ಮೋದಿ ಆರೋಪಿಸಿದ್ದಾರೆ. ಆದರೆ ಎನ್‌ಡಿಎ ಸರಕಾರ ಈ ಸ್ಥಿತಿಯನ್ನು ಬದಲಾಯಿಸಲು ಶ್ರಮಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News