×
Ad

ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಗಾಯಗಳಿಗೆ ಮುತ್ತಿಕ್ಕಿದ ಇರುವೆಗಳು!

Update: 2018-07-11 19:46 IST

ರಾಯಪುರ,ಜು.11: ಚಿಕಿತ್ಸೆಗಾಗಿ ಛತ್ತೀಸ್‌ಗಡದ ಆಸ್ಪತ್ರೆಗೆ ದಾಖಲಾಗಿದ್ದ 30ರ ಹರೆಯದ ವ್ಯಕ್ತಿಯೋರ್ವ ಸಾಯುವ ಎರಡು ದಿನಗಳ ಮೊದಲು ಆತನ ಗಾಯಗಳಿಗೆ ಇರುವೆಗಳು ಮುತ್ತಿಕೊಂಡಿದ್ದವು. ಆಂಗ್ಲ ಸುದ್ದಿವಾಹಿನಿಗೆ ಲಭ್ಯವಾಗಿರುವ ವೀಡಿಯೊದಲ್ಲಿ ಬ್ಯಾಂಡೇಜ್ ಸುತ್ತಲಾಗಿದ್ದ ಆತನ ತೋಳಿನ ಮೇಲೆ ಇರುವೆಗಳು ಹರಿದಾಡುವುದು ಸ್ಪಷ್ಟವಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸಮಜಾಯಿಷಿ ನೀಡಲು ಮುಂದಾದ ವೈದ್ಯರೋರ್ವರು,ಈ ಮಳೆಗಾಲದ ದಿನಗಳಲ್ಲಿ ಎಲ್ಲೆಂದರಲ್ಲಿ ಇರುವೆಗಳು ಸಾಮಾನ್ಯ ಮತ್ತು ಆತನ ಕೈಮೇಲೆಯೂ ‘ಒಂದೆರಡು’ ಇರುವೆಗಳು ಇದ್ದಿರಬಹುದು ಎಂದು ಹೇಳಿದ್ದಾರೆ. ಯಾವುದೇ ನಿಲ್ಯಕ್ಷವನ್ನು ಅವರು ನಿರಾಕರಿಸಿದ್ದಾರೆ.

ಜೂ.28ರಂದು ಮಾನೇಂದ್ರಗಡದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರಗೆ ಈ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ. ಆತನ ತಲೆಯಿಂದ ರಕ್ತ ಸುರಿಯುತ್ತಿತ್ತು. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೆ ಒಯ್ಯಲು ಯಾರೂ ಮುಂದಾಗಿರಲಿಲ್ಲ. ಸ್ಥಳೀಯ ಶಾಸಕರ ಮಧ್ಯಪ್ರವೇಶದಿಂದ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಸರಕಾರಿ ಆ್ಯಂಬುಲೆನ್ಸ್‌ನಲ್ಲಿ 50 ಕಿ.ಮೀ.ದೂರದ ಆಸ್ಪತ್ರೆಗೆ ರವಾನಿಸಲಾಗಿತ್ತು. ವ್ಯಕ್ತಿಯ ಮೈಮೇಲೆ ಹಲವಾರು ಗಾಯಗಳಿದ್ದವು.

ಮಾಧ್ಯಮ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಈ ವ್ಯಕ್ತಿಯ ಕೈಮೇಲೆ,ಗಾಯಗಳ ಮೇಲೆ ಇರುವೆಗಳು ಹರಿದಾಡುತ್ತಿರುವುದನ್ನು ಕಂಡು ದಂಗಾಗಿದ್ದರು. ಕನಿಷ್ಠ ಎರಡು ದಿನಗಳ ಕಾಲ ಇರುವೆಗಳು ಆತನ ಗಾಯಗಳಿಗೆ ಮುತ್ತಿಕೊಂಡಿದ್ದವು ಎಂದು ಸ್ಥಳೀಯ ಮಾನವ ಹಕ್ಕು ಕಾರ್ಯಕರ್ತರೋರ್ವರು ತಿಳಿಸಿದರು. ರೋಗಿಯು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆಸ್ಪತ್ರೆಗೆ ದಾಖಲಾದ 12 ದಿನಗಳ ಬಳಿಕ ,ಸೋಮವಾರ ಆತ ಕೊನೆಯುಸಿರೆಳೆದಿದ್ದ.

ಆತನ ಕೈಮೇಲೆ ಎಲ್ಲೋ ಒಂದೆರಡು ಇರುವೆಗಳು ಇದ್ದಿರಬಹುದು. ಸಹಾಯಕರೂ ಇಲ್ಲ,ಹೀಗಾಗಿ ಒಬ್ಬನೇ ರೋಗಿಗೆ ಹೆಚ್ಚು ಗಮನ ನೀಡಲು ನಮಗೆ ಸಾಧ್ಯವಿಲ್ಲ. ಆತನಿಗೆ ಗ್ಲುಕೋಸ್ ನೀಡಲಾಗಿತ್ತು. ಅದು ಸಿಹಿಯಾಗಿರುವುದರಿಂದ ಇರುವೆಗಳು ಬಂದಿದ್ದಿರಬಹುದು ಎಂದು ವೈದ್ಯಾಧಿಕಾರಿ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News