ಪ.ಜಾ., ಪ.ಪಂ. ಭಡ್ತಿಯಲ್ಲಿ ‘ಕೆನೆಪದರ’: ಮಧ್ಯಂತರ ಆದೇಶಕ್ಕೆ ಸುಪ್ರೀಂ ನಕಾರ
ಹೊಸದಿಲ್ಲಿ, ಜು. 11: ಸರಕಾರಿ ಉದ್ಯೋಗದಲ್ಲಿ ಭಡ್ತಿ ನೀಡುವಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯಲ್ಲಿ ‘ಕೆನೆಪದರ’ ಅನ್ವಯಿಸುವುದರ ಕುರಿತು ತನ್ನ 2006ರ ತೀರ್ಪಿನ ವಿರುದ್ಧ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
2006ರ ತೀರ್ಪನ್ನು ಪರಿಶೀಲಿಸಲು ಏಳು ಸದಸ್ಯರ ನ್ಯಾಯ ಪೀಠದ ಅಗತ್ಯತೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಹೇಳಿದೆ. ವಿವಿಧ ನ್ಯಾಯಾಲಯಗಳ ತೀರ್ಪಿನಿಂದ ಗೊಂದಲ ಮೂಡಿರುವ ಹಿನ್ನೆಲೆಯಲ್ಲಿ ರೈಲ್ವೆ ಹಾಗೂ ಸೇವಾ ವಲಯದಲ್ಲಿ ಲಕ್ಷಗಟ್ಟಲೆ ಉದ್ಯೋಗಗಳು ಭರ್ತಿಯಾಗದೆ ಹಾಗೇ ಉಳಿದುಕೊಂಡಿರುವುದರಿಂದ ಈ ಪ್ರಕರಣವನ್ನು ತುರ್ತಾಗಿ 7 ಸದಸ್ಯರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಬೇಕು ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹೇಳಿದ್ದಾರೆ. ಒಂದು ಸಾಂವಿಧಾನಿಕ ಪೀಠ ಈಗಾಗಲೇ ವಿವಿಧ ವಿಷಯಗಳ ವಿಚಾರಣೆ ನಡೆಸುತ್ತಿದೆ ಹಾಗೂ ಈ ವಿಷಯವನ್ನು ಆಗಸ್ಟ್ ಮೊದಲ ವಾರದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ಹೇಳಿದೆ.
ಎಂ. ನಾಗರಾಜ್ ಹಾಗೂ ಇತರರು ಮತ್ತು ಯೂನಿಯನ್ ಆಫ್ ಇಂಡಿಯಾ ನಡುವಿನ ಪ್ರಕರಣದ 2006ರ ತೀರ್ಪನ್ನು ಮರು ಪರಿಶೀಲಿಸಬೇಕೇ, ಬೇಡವೇ ಎಂಬ ಬಗೆಗಿನ ವಿಚಾರವನ್ನು ಐವರು ಸದಸ್ಯರ ನ್ಯಾಯಪೀಠ ಪರಿಶೀಲಿಸಲಿದೆ ಎಂದು ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷ ನವೆಂಬರ್ 15ರಂದು ಹೇಳಿತ್ತು. ಇತರ ಹಿಂದುಳಿದ ವರ್ಗದಲ್ಲಿ ‘ಕೆನೆ ಪದರ’ದ ಕುರಿತು 1992ರ ಇಂದ್ರಾ ಸಾವ್ನಿ ಹಾಗೂ ಇತರರು ಮತ್ತು ಯೂನಿಯನ್ ಆಫ್ ಇಂಡಿಯಾ (ಮಂಡಲ್ ಆಯೋಗದ ತೀರ್ಪು ಎಂದು ಜನಪ್ರಿಯವಾಗಿದೆ) ನಡುವಿನ ಹಾಗೂ 2005ರ ಇ.ವಿ. ಚಿನ್ನಯ್ಯ ಮತ್ತು ಸ್ಟೇಟ್ ಆಫ್ ಆಂಧ್ರಪ್ರದೇಶ ನಡುವಿನ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಸರಕಾರಿ ಉದ್ಯೋಗದ ಭಡ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ‘ಕೆನೆಪದರ’ ಪರಿಕಲ್ಪನೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಎ.ಎಂ. ನಾಗರಾಜ್ ತೀರ್ಪು ಹೇಳಿತ್ತು. ಆದಾಗ್ಯೂ, ‘‘ಕಾನೂನಿಗೆ ಅನುಗುಣವಾಗಿ’’ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಭಡ್ತಿಯಲ್ಲಿ ಮೀಸಲಾತಿ ನೀಡುವುದನ್ನು ಮುಂದುವರಿಸುವಂತೆ ಸರ್ವೋಚ್ಚ ನ್ಯಾಯಾಲಯ ಜೂನ್ 5ರಂದು ಅವಕಾಶ ನೀಡಿರುವುದು ಕೇಂದ್ರ ಸರಕಾರಕ್ಕೆ ಪ್ರಮುಖ ಪರಿಹಾರ ದೊರಕಿದಂತಾಗಿತ್ತು.
ವಿವಿಧ ಉಚ್ಚ ನ್ಯಾಯಾಲಯಗಳು ಆದೇಶ ಜಾರಿ ಮಾಡಿದ ಹಿನ್ನೆಲೆಯಲ್ಲಿ ಬಡ್ತಿಯ ಸಂಪೂರ್ಣ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂಬ ಕೇಂದ್ರ ಸರಕಾರದ ಪ್ರತಿಪಾದನೆಯನ್ನು ಸರ್ವೋಚ್ಚ ನ್ಯಾಯಾಲಯ ಪರಿಗಣಿಸಿತ್ತು ಹಾಗೂ ಈ ವಿಷಯದ ಬಗ್ಗೆ ‘ಯಥಾಸ್ಥಿತಿ’ ಕಾಯ್ದುಕೊಳ್ಳುವಂತೆ 2015ರಲ್ಲಿ ತೀರ್ಪು ನೀಡಿತ್ತು. ಕೇಂದ್ರ ಸರಕಾರ ಕಾನೂನಿಗೆ ಅನುಗುಣವಾಗಿ ಬಡ್ತಿ ನೀಡುವುದನ್ನು ತಡೆಯಲು ಸಾಧ್ಯವಿರಲಿಲ್ಲ ಎಂದು ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ರಜಕಾಲದ ಪೀಠ ಹೇಳಿತ್ತು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸರಕಾರಿ ಉದ್ಯೋಗಿಗಳ ಬಡ್ತಿಯಲ್ಲಿ ಮೀಸಲಾತಿ ಕುರಿತಂತೆ ದಿಲ್ಲಿ, ಬಾಂಬೆ, ಪಂಜಾಬ್ ಹಾಗೂ ಹರ್ಯಾಣ ನ್ಯಾಯಾಲಯಗಳು ಪ್ರತ್ಯೇಕ ತೀರ್ಪು ನೀಡಿವೆ. ಈ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಕುರಿತು ಸರ್ವೋಚ್ಚ ನ್ಯಾಯಾಲಯ ಕೂಡ ವಿಭಿನ್ನ ತೀರ್ಪು ನೀಡಿದೆ ಎಂದು ಕೇಂದ್ರ ಸರಕಾರ ಹೇಳಿದೆ.