10 ಜನರ ಸಾವಿಗೆ ನೇಣು ಕಾರಣ:ಮರಣೋತ್ತರ ಪರೀಕ್ಷೆ ವರದಿ
ಹೊಸದಿಲ್ಲಿ,ಜು.11: ದಿಲ್ಲಿಯ ಬುರಾರಿ ಪ್ರದೇಶದ ಮನೆಯೊಂದರಲ್ಲಿ ನಿಗೂಢ ಸಾವನ್ನಪ್ಪಿದ್ದ ಒಂದೇ ಕುಟುಂಬದ 11 ಜನರ ಪೈಕಿ 10 ಜನರು ನೇಣಿನಿಂದ ಮೃತಪಟ್ಟಿದ್ದಾರೆ ಮತ್ತು ಅವರ ಶವಗಳ ಮೇಲೆ ಯಾವುದೇ ಗಾಯಗಳ ಗುರುತುಗಳಿರಲಿಲ್ಲ ಎಂದು ಬುಧವಾರ ಬಿಡುಗಡೆಗೊಳಿಸಲಾದ ಮರಣೋತ್ತರ ಪರೀಕ್ಷೆಯ ವರದಿಯು ತಿಳಿಸಿದೆ. ಈ ಹತ್ತೂ ಜನರ ಶವಗಳು ಕಣ್ಣಿಗೆ ಬಟ್ಟೆ ಕಟ್ಟಿದ್ದ, ಬಾಯಿಯನ್ನು ಮುಚ್ಚಿಸಿದ್ದ ಮತ್ತು ಕೈಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
11ನೇ ಹಾಗೂ ಕುಟುಂಬದ ಹಿರಿಯ ವ್ಯಕ್ತಿಯಾಗಿದ್ದ ನಾರಾಯಣಿ ದೇವಿಯ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಇತರರ ಶವಗಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದರೆ ಆಕೆಯ ಶವ ಮಾತ್ರ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಎಲ್ಲ 11 ಜನರೂ ಮೂಢನಂಬಿಕೆಯ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇ ಇರಲಿಲ್ಲ,ಅವರನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.