×
Ad

ವ್ಯಭಿಚಾರ ಅಪರಾಧವಾಗಿಯೇ ಉಳಿಯಲಿ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರದ ನಿವೇದನೆ

Update: 2018-07-11 20:00 IST

ಹೊಸದಿಲ್ಲಿ,ಜು.11: ಮದುವೆಯ ಪಾವಿತ್ರ್ಯವನ್ನು ರಕ್ಷಿಸಲು ವ್ಯಭಿಚಾರವು ದಂಡನೀಯ ಅಪರಾಧವಾಗಿಯೇ ಉಳಿಯಬೇಕು ಎಂದು ಕೇಂದ್ರ ಸರಕಾರವು ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದೆ. ವ್ಯಭಿಚಾರಕ್ಕಾಗಿ ದಂಡನೆಯಲ್ಲಿ ಲಿಂಗ ಸಮಾನತೆ ಇರಬೇಕು ಎಂದು ಆಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ವ್ಯಭಿಚಾರಕ್ಕೆ ಸಂಬಂಧಿಸಿದ ಬ್ರಿಟಿಷ್ ಕಾಲದ ಕಾನೂನಿನಂತೆ ವ್ಯಕ್ತಿಯೋರ್ವ ಇನ್ನೋರ್ವ ವ್ಯಕ್ತಿಯ ಪತ್ನಿಯ ಜೊತೆಗೆ ಅನೈತಿಕ ಸಂಬಂಧಗಳನ್ನು ಹೊಂದಿದ್ದರೆ ಆತನಿಗೆ ಐದು ವರ್ಷಗಳ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಐವರು ನ್ಯಾಯಾಧೀಶರ ಪೀಠವು ಈ ಅರ್ಜಿಯ ವಿಚಾರಣೆ ನಡೆಸುವ ನಿರೀಕ್ಷೆಯಿದೆ.

 ವ್ಯಭಿಚಾರ ಕುರಿತ 157 ವರ್ಷಗಳಷ್ಟು ಹಳೆಯದಾದ ಈ ಕಾನೂನನ್ನು ಪ್ರಶ್ನಿಸಿರುವ ಅರ್ಜಿಯು,ಕೇವಲ ಆರೋಪಿತ ಪುರುಷನಿಗೆ ಮಾತ್ರವಲ್ಲ,ಆತನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿವಾಹಿತ ಮಹಿಳೆಯು ಇದಕ್ಕೆ ಕುಮ್ಮಕ್ಕು ನೀಡಿರುತ್ತಾಳೆ ಮತ್ತು ಅಪರಾಧದ ಬಲಿಪಶುವಾಗಿರುವುದಿಲ್ಲವಾದ್ದರಿಂದ ಆಕೆಗೂ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದೆ.

ಅರ್ಜಿಯ ವಜಾಕ್ಕೆ ಒತ್ತು ನೀಡಿರುವ ಕೇಂದ್ರವು,ಐಪಿಸಿಯ ಕಲಂ 497 ಮತ್ತು ಸಿಪಿಸಿಯ ಕಲಂ 198(2) ಅನ್ನು ರದ್ದುಗೊಳಿಸಿದರೆ ವಿವಾಹ ಬಂಧ ಮತ್ತು ಅದರ ಪಾವಿತ್ರಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡಿರುವ ಭಾರತೀಯ ಮೌಲ್ಯಗಳಿಗೆ ಅಪಾಯವುಂಟಾಗುತ್ತದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News