ಕಲಂ 377ರ ಸಿಂಧುತ್ವ ಸರ್ವೋಚ್ಚ ನ್ಯಾಯಾಲಯದ ವಿವೇಕಕ್ಕೆ ಬಿಟ್ಟದ್ದು: ಕೇಂದ್ರ
ಹೊಸದಿಲ್ಲಿ, ಜು. 11: ಸಮ್ಮತಿಯ ಮೇರೆಗೆ ಇಬ್ಬರು ವಯಸ್ಕರ ಅನೈಸರ್ಗಿಕ ಲೈಂಗಿಕ ಸಂಪರ್ಕವನ್ನು ಅಪರಾಧೀಕರಣಗೊಳಿಸುವ ವಿಷಯದ ಕುರಿತ ಕಲಂ 377ರ ಸಾಂವಿಧಾನಿಕ ಸಿಂಧುತ್ವದ ನಿರ್ಧಾರವನ್ನು ನ್ಯಾಯಾಮೂರ್ತಿಗಳ ವಿವೇಕಕ್ಕೆ ಬಿಡಲಾಗುವುದು ಎಂದು ಕೇಂದ್ರ ಸರಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸರ್ವೋಚ್ಚ ನ್ಯಾಯಾಲಯ 377 ಕಾಯ್ದೆಯನ್ನು ನಿಭಾಯಿಸುವ ಬಗ್ಗೆ ತಮ್ಮ ಯಾವುದೇ ಆಕ್ಷೇಪ ಇಲ್ಲ ಎಂದು ಕೇಂದ್ರ ಸರಕಾರ, ಒಂದೇ ರೀತಿಯ ಲಿಂಗದ ಇಬ್ಬರು ವಯಸ್ಕರ ನಡುವಿನ ಒಪ್ಪಿತ ಲೈಂಗಿಕ ಸಂಪರ್ಕವನ್ನು ಮರು ಅಪರಾಧೀಕರಣಗೊಳಿಸಿದ 2013ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ದೂರುಗಳ ಗುಚ್ಛದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ತಿಳಿಸಿದೆ. ‘‘ಇಬ್ಬರು ವಯಸ್ಕರ ನಡುವಿನ ಒಪ್ಪಿತ ಲೈಂಗಿಕ ಕ್ರಿಯೆಗೆ ಸಂಬಂಧಿಸಿ ಕಲಂ 377ರ ಸಿಂಧುತ್ವದ ನಿರ್ಧಾರವನ್ನು ನ್ಯಾಯಾಲಯಕ್ಕೆ ಬಿಟ್ಟಿದ್ದೇವೆ.’’ ಎಂದು ಕೇಂದ್ರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು.
377 ಕಲಂನ ಸಾಂವಿಧಾನಿಕ ಸಿಂಧುತ್ವವನ್ನು ಮಾತ್ರ ನಿರ್ಧರಿಸಲಾಗುವುದು ಎಂದು ಮಂಗಳವಾರವೇ ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಮೂರ್ತಿ ಆರ್.ಎಫ್. ನಾರಿಮನ್, ಡಿ.ವೈ. ಚಂದ್ರಚೂಡ ಹಾಗೂ ಇಂದು ಮಲ್ಹೋತ್ರ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ.