ಗುರುವಾರ ನಂದಿನಿ ಹಾಲು ಖರೀದಿಸಿದರೆ 'ತೃಪ್ತಿ' ಉಚಿತ!

Update: 2018-07-11 14:34 GMT

ಉಡುಪಿ, ಜು.11: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಹಾಲು ಸಂಗ್ರಹಣೆ ಹೆಚ್ಚಾಗುತಿದ್ದು, ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಯೋಜನವನ್ನು ನಂದಿನಿ ಗ್ರಾಹಕರಿಗೂ ವಿಸ್ತರಿಸುವ ಉದ್ದೇಶದಿಂದ ನಾಳೆ (ಜು.12) ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ನಂದಿನಿ ಗ್ರಾಹಕರು ಖರೀದಿಸುವ ಪ್ರತಿ ಪ್ಯಾಕೆಟ್ (500 ಮಿ.ಲೀ, 1ಲೀ, 6ಲೀ) ನಂದಿನಿ ಹಾಲಿನ ಪ್ಯಾಕೆಟ್‌ನೊಂದಿಗೆ 90 ದಿನಗಳ ಕಾಲ ಬಾಳಿಕೆ ಬರುವ 180 ಮಿ.ಲೀ. ನಂದಿನಿ ತೃಪ್ತಿ ಹಾಲಿನ ಒಂದು ಪ್ಯಾಕೆಟ್‌ನ್ನು ಉಚಿತವಾಗಿ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.

ಮಣಿಪಾಲದ ಕೆಎಂಎಫ್ ಡೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನ ಸದ್ಭಳಕೆಗಾಗಿ ಒಕ್ಕೂಟ ಗ್ರಾಹಕ ಸ್ನೇಹಿ ಯೋಜನೆ ರೂಪಿಸಿದ್ದು, ನಂದಿನಿ ಗ್ರಾಹಕರಿಗೆ ಅಂದಾಜು 62 ಲಕ್ಷ ರೂ ಮೌಲ್ಯದ ತೃಪ್ತಿ ಹಾಲನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ ಎಂದರು.

ಮನೆ ಮನೆಗೆ ವಿತರಿಸುವವ ಹಾಲಿನ ಜೊತೆಗೂ ಜು.12ರಂದು ತೃಪ್ತಿ ಹಾಲನ್ನು ಉಚಿತವಾಗಿ ನೀಡಬೇಕು ಎಂದು ಸೂಚಿಸಲಾಗಿದೆ. ಎಲ್ಲಾ ಡೀಲರ್‌ಗಳಿಗೆ ಸಹ ಉಚಿತ ಹಾಲು ವಿತರಣೆ ಕುರಿತಂತೆ ಮಾಹಿತಿ ನೀಡಲಾಗಿದ್ದು, ಅಗತ್ಯವಿರುವ ಒಟ್ಟು 6.5 ಲಕ್ಷ ನಂದಿನಿ ತೃಪ್ತಿ ಹಾಲಿನ ಪ್ಯಾಕೆಟ್ ಗಳನ್ನು ಸಿದ್ದಪಡಿಸಲಾಗಿದೆ. ಗ್ರಾಹಕರಿಗೆ ಸಮರ್ಪಕ ರೀತಿಯಲ್ಲಿ ಈ ಹಾಲು ವಿತರಣೆಯಾಗುವುದನ್ನು ಪರಿಶೀಲಿಸಲು ಉಸ್ತುವಾರಿ ತಂಡಗಳನ್ನು ಸಹ ರಚಿಸಲಾಗಿದೆ. ಒಟ್ಚಿನಲ್ಲಿ ಗ್ರಾಹಕರಿಗೆ ಯಾವುದೆ ಲೋಪವಾಗದಂತೆ ಎಲ್ಲರಿಗೂ ಪ್ರಯೋಜನ ದೊರಕಿಸಿಕೊಡಲು ಉದ್ದೇಶಿಸಲಾಗಿದೆ ಎಂದು ರವಿರಾಜ್ ಹೆಗ್ಡೆ ನುಡಿದರು.

ರಾಜ್ಯದಲ್ಲಿರುವ ಒಕ್ಕೂಟದ 14 ಘಟಕಗಳಲ್ಲಿ ಇಂಥ ಯೋಜನೆ ಅನುಷ್ಠಾನ ಗೊಳ್ಳುತ್ತಿರುವುದು ಇದೇ ಪ್ರಥಮ. ಇದರ ಯಶಸ್ಸು, ಸಾಧಕ-ಬಾಧಕಗಳನ್ನು ನೋಡಿಕೊಂಡು, ಮುಂದಿನ ದಿನಗಳಲ್ಲಿ ಸಂಗ್ರಹವಾಗುವ ಹೆಚ್ಚುವರಿ ಹಾಲಿನ ಕುರಿತು ಬೇರೆ ಯೋಜನೆ ರೂಪಿಸಲಾಗುವುದು ಎಂದರು.

ಹಾಲು ಉತ್ತಮ ಸಮತೋಲಿತ ಆಹಾರವಾಗಿದ್ದು, ಉತ್ತಮ ಆರೋಗ್ಯದ ದೃಷ್ಠಿಯಿಂದ ಕಲಬೆರಕೆಯಿಲ್ಲದೇ ಅತ್ಯಂತ ಪರಿಶುದ್ದವಾಗಿರುವ ನಂದಿನಿ ಹಾಲನ್ನು ಮಕ್ಕಳಿಂದ ವಯೋ ವೃದ್ದರವರೆಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಳಸುವಂತೆ ರವಿರಾಜ್ ಹೆಗ್ಡೆ ತಿಳಿಸಿದರು.

ಉಡುಪಿಗೆ ಸಮೀಪದ ಉಪ್ಪೂರಿನಲ್ಲಿ ಅಂದಾಜು 85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 2.50 ಲಕ್ಷ ಲೀ. ಸಾಮರ್ಥ್ಯದ ನೂತನ ಡೇರಿ ಸ್ಥಾವರ ಈ ವಷಾಂತ್ಯದ ವೇಳೆಗೆ ಉದ್ಘಾಟನೆಯಾಗಲಿದ್ದು, ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಿಂದ ಕೂಡಿರಲಿದೆ ಎಂದು ಅಧ್ಯಕ್ಷರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಸೂರ್ಯ ಶೆಟ್ಟಿ, ಹದ್ದೂರ್ ರಾಜೀವ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕ ಡಾ.ಬಿ.ವಿ ಸತ್ಯನಾರಾಯಣ್,ಪ್ರಬಾರ ವ್ಯವಸ್ಥಾಪಕ ಜಯದೇವಪ್ಪಕೆ.ಹಾಗೂ ಮಣಿಪಾಲ ಘಟಕದ ಉಪವ್ಯವಸ್ಥಾಪಕ ಲಕ್ಕಪ್ಪಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News