ಅಂತರ್ಜಾಲ ತಟಸ್ಥತೆಗೆ ಸರಕಾರದ ಒಪ್ಪಿಗೆ

Update: 2018-07-11 15:12 GMT

ಹೊಸದಿಲ್ಲಿ,ಜು.11: ದೇಶದಲ್ಲಿ ನೆಟ್ ನ್ಯೂಟ್ರಾಲಿಟಿ ಅಥವಾ ಜಾಲ ತಟಸ್ಥತೆಯ ನೀತಿಗಳನ್ನು ಸರಕಾರವು ಒಪ್ಪಿಕೊಂಡಿದ್ದು, ಅಂತರ್ಜಾಲ ಲಭ್ಯತೆಯು ಈಗಿರುವಂತೆ ನಿರ್ಬಂಧರಹಿತ ಮತ್ತು ತಾರತಮ್ಯರಹಿತವಾಗಿ ಮುಂದುವರಿಯಲಿದೆ. ಇದೇ ವೇಳೆ ನೆಟ್ ನ್ಯೂಟ್ರಾಲಿಟಿಯ ಉಲ್ಲಂಘನೆಗೆ ಭಾರೀ ದಂಡನೆಯ ಎಚ್ಚರಿಕೆಯನ್ನೂ ಅದು ನೀಡಿದೆ. ಮೊಬೈಲ್,ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ಕಂಪನಿಗಳು ಅಂತರ್ಜಾಲ ಸೇವೆಯೊದಗಿಸುವಲ್ಲಿ ಯಾವುದೇ ತಾರತಮ್ಯವನ್ನು ಪ್ರದರ್ಶಿಸುವಂತಿಲ್ಲ. ಕೆಲವೇ ಸೇವೆಗಳು ಮತ್ತು ಜಾಲಗಳನ್ನು ಉಚಿತವಾಗಿ ನೀಡಿ ಇತರ ಸೇವೆಗಳು ಮತ್ತು ಜಾಲತಾಣಗಳು ಮತ್ತು ಅಧಿಕ ವೇಗವನ್ನು ನೀಡಲು ಹೆಚ್ಚುವರಿ ಶುಲ್ಕಗಳನ್ನು ವಸೂಲು ಮಾಡುವಂತಿಲ್ಲ,ಅಲ್ಲದೇ ಝೀರೊ ರೇಟೆಡ್ ಪ್ಲಾಟ್‌ಫಾರ್ಮ್‌ಗಳನ್ನು ಸೃಷ್ಟಿಸುವಂತಿಲ್ಲ.

ಬುಧವಾರ ಸಭೆ ಸೇರಿದ ಅಂತರ್ ಸಚಿವಾಲಯ ದೂರಸಂಪರ್ಕ ಆಯೋಗವು ದೇಶದಲ್ಲಿ ಜಾಲ ತಟಸ್ಥತೆಯ ಮುಂದುವರಿಕೆಗೆ ಹಸಿರು ನಿಶಾನೆಯನ್ನು ತೋರಿಸಿದೆ. ಇದು ತಕ್ಷಣದಿಂದಲೇ ಜಾರಿಗೊಳ್ಳುತ್ತದೆ ಎಂದು ದೂರಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್ ಅವರು ತಿಳಿಸಿದರು. ಸರಕಾರದ ಈ ಹೆಜ್ಜೆಯಿಂದಾಗಿ ಅಂತರ್ಜಾಲದ ಮೇಲೆ ಏಕಸ್ವಾಮ್ಯವನ್ನು ಸಾಧಿಸಲು ಯಾವುದೇ ನಿರ್ವಾಹಕ,ಅಂತರ್ಜಾಲ ಸೇವೆ ಪೂರೈಕೆ ಸಂಸ್ಥೆಗಳಿಗೆ ಸಾಧ್ಯವಾಗುವುದಿಲ್ಲ,ಹೀಗಾಗಿ ಇದೊಂದು ಪ್ರಗತಿಪರ ಕ್ರಮ ಎಂದು ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News