ಅನುಮತಿ ಇಲ್ಲದೆ ಮನೆಯಲ್ಲಿ ಆಧಾರ್ ನೋಂದಣಿ: ಆರೋಪ

Update: 2018-07-11 17:04 GMT

ಬಂಟ್ವಾಳ, ಜು. 11: ಬಂಟ್ವಾಳ ಕೆಳಗಿನಪೇಟೆಯಲ್ಲಿ ಮನೆಯೊಂದರಲ್ಲಿ ಸರಕಾರದ ಅನುಮತಿ ಇಲ್ಲದೆ ಆಧಾರ್ ಚೀಟಿಗಳ ನೋಂದಣಿ ಕಾರ್ಯ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ಸಹಾಯದೊಂದಿಗೆ ಪರಿಶೀಲನೆ ನಡೆಸಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಕಾರಿಗಳ ತಂಡ ಆಧಾರ್ ನೋಂದಣಿಗೆ ಉಪಯೋಗವಾಗುವ ಸಲಕರಣೆಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

ಪರಿಶೀಲನೆ ಸಂದರ್ಭ ಮನೆಯಲ್ಲಿ ಅನುಮತಿ ಇಲ್ಲದೆ ಆಧಾರ್ ನೋಂದಣಿಯಾಗುತ್ತಿದ್ದುದು ಕಂಡುಬಂದಿರುವುದಾಗಿ ಎಸ್ಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಆಧಾರ್ ನೋಂದಣಿ ಕೇಂದ್ರ ಅನುಮತಿ ಇಲ್ಲದೆ ಕಾರ್ಯಾಚರಿಸುತ್ತಿದ್ದುದು ಕಂಡುಬಂದಿದ್ದು, ಅಲ್ಲಿದ್ದ ಒಂದು ಲ್ಯಾಪ್ ಟಾಪ್, ಒಂದು ಪ್ರಿಂಟರ್, ಒಂದು ಸ್ಕ್ಯಾನರ್, ಒಂದು ಐಸ್ಕ್ಯಾನ್, ಒಂದು ಬಯೋಮೆಟ್ರಿಕ್ ಸಿಸ್ಟಮ್, ಒಂದು ಡಿಜಿಟಲ್ ಕ್ಯಾಮರಾ , ಒಂದು ಜಿಪಿಎಸ್ ವ್ಯವಸ್ಥೆಯನ್ನು ವಶಪಡಿಸಿಕೊಳ್ಳಲಾಯಿತು. ತಪಾಸಣೆಯ ವೇಳೆ  ಬುಧವಾರ 19, ಮಂಗಳವಾರ 25 ನೋಂದಾವಣಿ ಆಗಿರುವುದು ಬೆಳಕಿಗೆ ಬಂದಿದೆ.

ಪರಿಶೀಲನೆ ನಡೆಸಿದ ತಂಡದಲ್ಲಿ ಬಂಟ್ವಾಳ ನಗರ ಠಾಣಾಕಾರಿ ಚಂದ್ರಶೇಖರ್, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ತಾಲೂಕು ಕಚೇರಿ ಸಿಬ್ಬಂದಿ ವಿಷುಕುಮಾರ್, ಗ್ರಾಮ ಲೆಕ್ಕಾಕಾರಿ ರಾಜು ಲಮಾಣಿ, ಸಿಬ್ಬಂದಿ ಸದಾಶಿವ ಕೈಕಂಬ, ಸುಂದರ, ಶೀತಲ್ ಭಾಗವಹಿಸಿದ್ದರು.

ಬಂಟ್ವಾಳ ಪೇಟೆಯ ನಿವಾಸಿ, ಜೆಡಿಎಸ್ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಹಾರೂನ್ ರಶೀದ್ ಅವರ ಮನೆಯಲ್ಲಿ ಯಾವುದೇ ಅನುಮತಿ ಇಲ್ಲದೇ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಆಧಾರ್ ಕಾರ್ಡ್ ನೋಂದಣಿ ಮಾಡುತ್ತಿರುವ ಬಗ್ಗೆ ತಹಶೀಲ್ದಾರ್ ಮಾಹಿತಿ ನೀಡಿದ್ದು, ಸ್ಥಳದಲ್ಲಿ ಒಬ್ಬರು ಆಪರೆಟರ್ ಇದ್ದು, ಈತನು ಆಧಾರ್ ಕಾರ್ಡ್ ನೋಂದಣಿ ಮಾಡುವ ಬಗ್ಗೆ ತರಬೇತಿಯನ್ನು ಪಡೆದಿದ್ದು, ಕಡಬ ಪಂಚಾಯತ್ ವ್ಯಾಪ್ತಿಯಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡುವ ಬಗ್ಗೆ ಕಡಬ ಪಂಚಾಯತ್‌ನಿಂದ ಅಧಿಕೃತ ಪತ್ರವನ್ನು ಪಡೆದಿದ್ದಾನೆ ಎಂದು ತಹಶೀಲ್ದಾರ್ ಅವರು ಮಾಹಿತಿದ್ದಾರೆಂದು ಎಸ್ಪಿ ಅವರು ತಿಳಿಸಿದ್ದಾರೆ. 

ಯಾವುದೇ ನಕಲಿ ಆಧಾರ್ ಕಾರ್ಡ್ ಮಾಡಿರುವುದು ಹಾಗೂ ಮಾಡುತ್ತಿರುವುದು ಕಂಡು ಬಂದಿರುವುದಿಲ್ಲ. ಈ ಬಗ್ಗೆ ತಹಶೀಲ್ದಾರ್ ಚರ್ಚಿಸಿದ್ದು, ಆಧಾರ್ ಕಾಯ್ದೆಯಡಿಯಲ್ಲಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿ, ಕ್ರಮ ಕೈಗೊಳ್ಳಲು ಅವಕಾಶವಿರುದರಿಂದ ತಹಶೀಲ್ದಾರ್ ಅವರಿಗೆ ಈ ಬಗ್ಗೆ ಸೂಕ್ತ ಹಿಂಬರಹವನ್ನು ನೀಡಲಾಗಿದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರು ಮಾಹಿತಿ ನೀಡಿದ್ದಾರೆ.

ಬಂಟ್ವಾಳ ಕೆಳಗಿನಪೇಟೆಯಲ್ಲಿರುವ ಮನೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಆಧಾರ್ ಕಾರ್ಡ್ ನೋಂದಣಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಪೊಲೀಸರು ಹಾಗೂ ಕಂದಾಯ ಇಲಾಖಾಧಿಕಾರಿಗಳ ತಂಡ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾಗಿ ಎಸ್ಪಿ ರವಿಕಾಂತೇಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News