1.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು; ದೂರು

Update: 2018-07-11 16:14 GMT

ಮಂಗಳೂರು, ಜು.11: ಮನೆಯಲ್ಲಿದ್ದ 1.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೇಶ್‌ಕುಮಾರ್ ಎಂಬವರ ಪತ್ನಿಗೆ ಸೇರಿದ ಮೂರೂವರೆ ಪವನ್ ತೂಕದ ಹವಳದ ಚಿನ್ನದ ಸರ, ಮಗುವಿನ 1.25 ಪವನ್ ತೂಕದ ಚಿಕ್ಕ ಉಂಗುರ, 2 ಮತ್ತು 1 ಪವನ್ ತೂಕದ ದೊಡ್ಡ ಉಂಗುರಗಳು, ಒಂದೂವರೆ ಪವನ್ ತೂಕದ ಕಿವಿಯ ಚಿನ್ನದ ಬೆಂಡೋಲೆ-ಜುಮುಕಿ, 2 ಹಾಗೂ ಎರಡೂವರೆ ತೂಕದ ಚಿನ್ನದ ಬಳೆಗಳು ಕಳವಾಗಿದ್ದು, ಒಟ್ಟು ಚಿನ್ನಾಭರಣಗಳ ವೌಲ್ಯ 1.75 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಎ.22ರಂದು ರಾಜೇಶ್‌ಕುಮಾರ್ ಪತ್ನಿ ಮದುವೆ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಸಂಜೆ ಮನೆಗೆ ಬಂದು ಚಿನ್ನಾಭರಣಗಳನ್ನು ಬಟ್ಟೆ-ಬರೆ ಇಡುವ ಜಾಗದಲ್ಲಿ ಬಿಚ್ಚಿಟ್ಟಿದ್ದಾರೆ. ಬಳಿಕ ಎ.27ರಂದು ಬೆಳಗ್ಗೆ ಬಟ್ಟೆ-ಬರೆಗಳನ್ನು ಜೋಡಿಸುವಾಗ ಚಿನ್ನಾಭರಣಗಳನ್ನು ಇಟ್ಟಿದ್ದ ಕರಡಿಗೆಯು ಪತ್ತೆಯಾಗದ್ದರಿಂದ ಮನೆಯ ಎಲ್ಲ ಕಡೆ ಹುಡುಕಾಡಿದರೂ ಚಿನ್ನಾಭರಣಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News