ಹುಸೇನಬ್ಬ ಕೊಲೆ ಪ್ರಕರಣ: ಎಸ್ಸೈ ಸಹಿತ 9 ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

Update: 2018-07-11 16:20 GMT

ಉಡುಪಿ, ಜೂ.18: ದನದ ವ್ಯಾಪಾರಿ ಹುಸೇನಬ್ಬ(62) ಕೊಲೆ ಪ್ರಕರಣದ ಆರೋಪಿಗಳಾದ ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್ ಸಹಿತ ಒಂಭತ್ತು ಮಂದಿಯ ನ್ಯಾಯಾಂಗ ಬಂಧನ ಅವಧಿಯನ್ನು ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಜು.24ರವರೆಗೆ ವಿಸ್ತರಿಸಿ ಇಂದು ಆದೇಶ ನೀಡಿದೆ.

ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯು ಇಂದಿಗೆ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಆದೇಶ ನೀಡಿದರು. ಭದ್ರತೆಯ ದೃಷ್ಠಿಯಿಂದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸ ಲಿಲ್ಲ. ಆದುದರಿಂದ ಇಂದಿನ ವಿಚಾರಣೆಯನ್ನು ಕಾರಾಗೃಹದಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಭಾರ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಹಾಜರಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಬಂಧಿತ 11 ಮಂದಿ ಆರೋಪಿಗಳ ಪೈಕಿ ಹಿರಿಯಡ್ಕ ಠಾಣಾ ಹೆಡ್‌ಕಾನ್‌ಸ್ಟೇಬಲ್ ಮೋಹನ್ ಕೊತ್ವಾಲ್, ಬಜರಂಗದಳದ ಮುಖಂಡ ಪ್ರಸಾದ್ ಕೊಂಡಾಡಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೂ.18ರಂದು ಜಾಮೀನು ಮಂಜೂರು ಮಾಡಿತ್ತು.
ಉಳಿದ ಆರೋಪಿಗಳಾಗದ ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್, ಜೀಪು ಚಾಲಕ ಗೋಪಾಲ್ ಹಾಗೂ ಪ್ರಮುಖ ಆರೋಪಿ ಸುರೇಶ್ ಮೆಂಡನ್, ಚೇತನ್ ಆಚಾರ್ಯ, ಶೈಲೇಶ್ ಶೆಟ್ಟಿ, ಗಣೇಶ್ ನಾಯ್ಕ, ಉಮೇಶ್ ಶೆಟ್ಟಿ, ರತನ್ ಪೂಜಾರಿ ಕಾರವಾರ ಜೈಲಿನಲ್ಲಿದ್ದರೆ, ಓರ್ವ ಆರೋಪಿ ದೀಪಕ್ ಹೆಗ್ಡೆ ಮಂಗಳೂರಿನ ಜೈಲಿನಲ್ಲಿದ್ದಾನೆ.

ಜು.13ಕ್ಕೆ ಜಾಮೀನು ವಿಚಾರಣೆ
ದನದ ವ್ಯಾಪಾರಿ ಹುಸೈನಬ್ಬ ಕೊಲೆ ಪ್ರಕರಣದ ಆರೋಪಿ ದೀಪಕ್ ಹೆಗ್ಡೆ ಜಾಮೀನು ಅರ್ಜಿಗೆ ಸಂಬಂಧಿಸಿ ಆರೋಪಿ ಪರ ವಕೀಲ ಅರುಣ್ ಬಂಗೇರ ಇಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಜು.13ರಂದು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಪ್ರತಿವಾದ ಮಂಡಿಸಲು ಅವಕಾಶ ನೀಡಿ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಆದೇಶ ನೀಡಿದರು. ಹುಸೇನಬ್ಬರಿಗೆ ಮನೆಯ ದನವನ್ನು ಮಾರಾಟ ಮಾಡಿ, ಬಳಿಕ ಆ ಕುರಿತು ಬಜರಂಗದಳದವರಿಗೆ ಮಾಹಿತಿ ನೀಡಿದ್ದ ದೀಪಕ್ ಹೆಗ್ಡೆ ಈ ಪ್ರಕರಣದಲ್ಲಿ ಬಂಧಿತನಾಗಿ ಇದೀಗ ಮಂಗಳೂರು ಜೈಲಿನಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News