ನವಯುಗ ವಿರುದ್ಧ ಪೊಲೀಸ್ ದೂರು ದಾಖಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Update: 2018-07-11 18:19 GMT

ಉಡುಪಿ, ಜು.11: ಕಾಪು ಸಮೀಪದ ಮೂಳೂರು ಎಂಬಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಗೂ ರಾ.ಹೆ. ಕಾಮಗಾರಿ ನಡೆಸಿರುವ ಗುತ್ತಿಗೆ ಸಂಸ್ಥೆ ನವಯುಗ ವಿರುದ್ಧ ದೂರು ದಾಖಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಮುಳೂರು ಮಸೀದಿ ದ್ವಾರದ ಬಳಿಯ ಹೆದ್ದಾರಿ ಕುಸಿತ ಕಂಡಿದ್ದು, ಇದಕ್ಕೆ ನವಯುಗ ಕಂಪೆನಿಯ ಅಸಮರ್ಪಕ ಕಾಮಗಾರಿಯೇ ಕಾರಣ ಎಂದು ದೂರಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಗೂ ಗುತ್ತಿಗೆ ಸಂಸ್ಥೆ ನವಯುಗ ವಿರುದ್ಧ ಪ್ರರಣ ದಾಖಲಿಸುವಂತೆ ತಿಳಿಸಿದ್ದಾರೆ.

‘ಮೂಳೂರಿನಲ್ಲಿ ರಾ.ಹೆ.ಯಲ್ಲಿ ಕುಸಿತ ಕಂಡು ಬಂದಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಗೂ ಗುತ್ತಿಗೆ ಸಂಸ್ಥೆ ನವಯುಗ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಸ್ಪಿಗೆ ಪತ್ರ ಬರೆದಿದ್ದೇನೆ. ಕಾಪು ತಹಶೀಲ್ದಾರ್ ಈ ಕುರಿತು ಕಾಪು ಪೊಲೀಸ್ ಠಾಣೆಗೆ ದೂರು ನೀಡಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪತ್ರಿಕೆಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯ ಸೂಚನೆಯಂತೆ ಕಾಪು ತಹಶೀಲ್ದಾರ್ ಗುರುಸಿದ್ದಯ್ಯ ಜು.12ರಂದು ಅಸಪರ್ಮಕ ಕಾಮಗಾರಿ ನಡೆಸಿರುವ ನವಯುಗ ಕಂಪೆನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News