ಪಡುಬಿದ್ರಿ: ಶಿಕ್ಷಕಿಯನ್ನು ವರ್ಗಾಹಿಸದಿದ್ದಲ್ಲಿ ಪ್ರತಿಭಟನೆ; ಎಚ್ಚರಿಕೆ
ಪಡುಬಿದ್ರಿ,ಜು.12: ಪಡುಬಿದ್ರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕಿ ಸಂಧ್ಯಾ ಸರಸ್ವತಿಯನ್ನು ತಕ್ಷಣವೇ ಇಲಾಖೆ ವರ್ಗಾಯಿಸಬೇಕು ಇಲ್ಲದಿದ್ದಲ್ಲಿ ಶಾಲೆಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ದಲಿತ ಮುಂಖಂಡರುಗಳಾದ ಶೇಖರ್ ಹೆಜ್ಮಾಡಿ ಮತ್ತು ಲೋಕೇಶ್ ಕಂಚಿನಡ್ಕ ಜಂಟಿಯಾಗಿ ಎಚ್ಚರಿಸಿದ್ದಾರೆ. ಪಡುಬಿದ್ರಿಯಲ್ಲಿ ಶಾಲಾ ಮಕ್ಕಳ ಪೋಷಕರೊಂದಿಗೆ ಸೇರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಂಧ್ಯಾ ಸರಸ್ವತಿ ಹಿರಿಯ ಸಹ ಶಿಕ್ಷಕಿಯಾಗಿ ಮೇಲಿನ ಸರ್ಕಾರಿ ವಿದ್ಯಾಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ಕರ್ತವ್ಯ ಲೋಪಕ್ಕಾಗಿ ಇವರ ಮೇಲೆ ಹಲವಾರು ದೂರುಗಳು ಗ್ರಾಮಸ್ಥರಿಂದ ಬಂದಿದೆ. ಅದಲ್ಲದೆ ಮಕ್ಕಳ ಹೆತ್ತವರು ಸಹಿತ ಪೋಷಕರು ಮಕ್ಕಳ ಬಗ್ಗೆ ವಿಚಾರಿಸಲು ಶಾಲೆಗೆ ಬಂದರೆ ಅವರನ್ನು ನಿರ್ಲಕ್ಷ್ಯಸುತ್ತಿದ್ದು, ಮಾತ್ರವಲ್ಲ ಶಾಲೆಯ ಹಾಗೂ ಮಕ್ಕಳ ಹಿತದೃಷ್ಠಿಯ ಬಗ್ಗೆ ಗಮನ ಹರಿಸದೆ ಶಾಲಾ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಶಾಲೆ ಹಾಗೂ ಮಕ್ಕಳ ಹಿತದೃಷ್ಠಿಯಿಂದ ಹಿರಿಯ ಸಹ ಶಿಕ್ಷಕಿಯಾದ ಸಂದ್ಯಾ ಸರಸ್ವತಿಯವರನ್ನು ತಕ್ಷಣವೇ ವರ್ಗಾವಣೆಗೊಳಿಸುವ ಮೂಲಕ ಶಾಲೆಯನ್ನು ಉಳಿಸಬೇಕಾಗಿದೆ. ಇಲ್ಲದಿದ್ದಲ್ಲಿ ಶಾಲಾ ಪೋಷಕರು ಸಹಿತ ಗ್ರಾಮಸ್ಥರೆಲ್ಲಾ ಒಂದಾಗಿ ಶಾಲಾ ಮುಂಭಾಗ ಉಗ್ರ ಪ್ರತಿಭಟನೆ ನಡೆಸಿ ಶಾಲೆ ಬೀಗ ಜಡಿಯ ಬೇಕಾದೀತು ಎಂಬುವುದಾಗಿ ಎಚ್ಚರಿಸಿದ್ದಾರೆ.
ಶಾಲಾ ಎಸ್.ಡಿ.ಎಂ.ಸಿ. ರಚನೆ ಮಾಡುವಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಕ್ಕಳ ಪೋಷಕರಲ್ಲದ ಉದ್ಯಮಿಯೋರ್ವರನ್ನು ನೇಮಿಸಲಾಗಿದೆ. ಎಸ್.ಡಿ.ಎಂ.ಸಿ ಬ್ಯಾಂಕ್ ಖಾತೆಯನ್ನು ನಿರ್ವಹಿಸುವಲ್ಲಿ ಅವ್ಯವಹಾರ ಮಾಡಲು ಇದರ ಕಾರ್ಯದರ್ಶಿಯಾಗಿದ್ದ ಸಂಧ್ಯಾ ಸರಸ್ವತಿಯವರ ಮೂಲ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಕ್ಷಣ ಇಲಾಖೆ ಈ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆಗೊಳಿಸಿದೆ. ಆದರೆ ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ವೈ. ಸುಕುಮಾರ್ ಎಂಬವರ ಮೂಲಕ ಶಾಲೆಗೆ ಸಂಬಂಧವೇ ಇಲ್ಲದ ಕೆಲವರನ್ನು ಸೇರಿಸಿಕೊಂಡು ಪ್ರತಿಭಟನೆ ಎಂಬ ಪ್ರಹಸನ ನಡೆಸುವ ಮೂಲಕ ಶಿಕ್ಷಕಿಯನ್ನು ಇಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶೇಖರ್ ಹೆಜ್ಮಾಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಕ್ಕಳ ಪೋಷಕರಾದ ವಿನೋದ್ ಪಡುಬಿದ್ರಿ, ರೆಹಮಾನ್, ಅಬ್ದುಲ್ ರಹೆಮಾನ್ ಹಾಗೂ ಕಾಂತಪ್ಪ ಉಪಸ್ಥಿತರಿದ್ದರು.