×
Ad

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಸಂಸದರೇ ಹೊಣೆ : ದೇವಿಪ್ರಸಾದ್ ಶೆಟ್ಟಿ

Update: 2018-07-12 18:48 IST

ಪಡುಬಿದ್ರಿ,ಜು.12: ರಾಷ್ಟ್ರೀಯ ಹೆದ್ದಾರಿ 66 ತಲಪಾಡಿಯಿಂದ ಕುಂದಾಪುರದವರೆಗಿನ ಚತುಷ್ಪತ ರಸ್ತೆ ಅಭಿವೃದ್ಧಿ ಕಾಮಗಾರಿ ಅವ್ಯವಸ್ಥೆಯ ಆಗರವಾಗಿದೆ. ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಜನಪ್ರತಿನಿಧಿಗಳ ಮಾತಿಗೆ ಬೆಲೆ ನೀಡದ ಗುತ್ತಿಗೆದಾರರ ದರ್ಪಕ್ಕೆ ಸಂಸದರುಗಳ ಬೇಜವಾಬ್ದಾರಿಯೇ ಕಾರಣವೆಂದು ಅವಿಭಜಿತ ಜಿಲ್ಲಾ ರಾಷ್ಟ್ರಿಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ  ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭದಿಂದ ಸಾವಿರಕ್ಕೂ ಹೆಚ್ಚು ಅಪಘಾತದಿಂದ ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಸಾವಿರಾರು ಮಂದಿ ಅಂಗಾಂಗಗಳನ್ನು ಕಳೆದುಕೊಂಡಿದ್ದು, ಹಲವು ಕುಟುಂಬಗಳು ಬೀದಿ ಪಾಲಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ಜನರ ಮಾರಣಹೋಮವಾಗಿದೆ. ಹೆದ್ದಾರಿ ಗುತ್ತಿಗೆದಾರರು ತಮಗೆ ಇಷ್ಟ ಬಂದಂತೆ ಅವಧಿ ಮೀರಿದರೂ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಉಡುಪಿ ಮೇಲ್ಸೇತುವೆ, ಪಡುಬಿದ್ರಿ ಪೇಟೆ ಹಾಗೂ ಮಂಗಳೂರು ಪಂಪುವೆಲ್ ಸೇತುವೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಜನರಿಗೆ ತೀರಾ ಅನಾನುಕೂಲವಾಗಿದೆಂದು ಶೆಟ್ಟಿ ಆರೋಪಿಸಿದ್ದಾರೆ.

25ರಂದು ಸಭೆ: ಒಂದು ತಿಂಗಳ ಒಳಗೆ ಕಾಮಗಾರಿಗಳು ಪೂರ್ತಿಗೊಳಿಸದಿದ್ದಲ್ಲಿ, ಜಿಲ್ಲಾಧಿಕಾರಿಗಳು ಟೋಲ್ ವಸೂಲಿಯನ್ನು ಸ್ಥಗಿತಗೊಳಿಸುವ ಸೂಚನೆ ನೀಡಬೇಕು. ತಪ್ಪಿದಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ "ರಾಷ್ಟ್ರೀಯ ಹೆದ್ದಾರಿ ಚಲೋ" ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಜು.25 ರಂದು ಉಭಯ ಜಿಲ್ಲೆಗಳ ಹೋರಾಟ ಸಮಿತಿಯ ಸಭೆ ಕರೆಯಲಾಗುವುದೆಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News