ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಉಲ್ಟಾ ಹೊಡೆದ ಇನ್ನಿಬ್ಬರು ಸಾಕ್ಷಿಗಳು
ಮುಂಬೈ,ಜು.12: ಸೊಹ್ರಾಬುದ್ದೀನ್ ಶೇಖ್ ಮತ್ತು ಪ್ರಜಾಪತಿ ತುಳಸಿ ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿಯ ಇನ್ನಿಬ್ಬರು ಪ್ರಾಸಿಕ್ಯೂಷನ್ ಪರ ಸಾಕ್ಷಿಗಳು ಗುರುವಾರ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಪ್ರತಿಕೂಲ ಸಾಕ್ಷ್ಯವನ್ನು ನುಡಿದಿದ್ದಾರೆ. ಇದರೊಂದಿಗೆ ಈ ಪ್ರಕರಣಗಳಲ್ಲಿ ಪ್ರತಿಕೂಲ ಸಾಕ್ಷಿಗಳ ಸಂಖ್ಯೆ 85ಕ್ಕೇರಿದೆ.
ಹಿಂದೆ ಪ್ರಜಾಪತಿ ವಿರುದ್ಧ ಉಜ್ಜೈನ್‌ನಲ್ಲಿ ದಾಖಲಾಗಿದ್ದ ಮೂರು ಕಳವು ಪ್ರಕರಣಗಳಲ್ಲಿ ಆತನ ಪರ ವಾದಿಸಿದ್ದ ನ್ಯಾಯವಾದಿ ಕೃಷ್ಣಾ ತ್ರಿಪಾಠಿ ಮತ್ತು 2006ರಲ್ಲಿ ಪ್ರಜಾಪತಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾಗ ರಾಜಸ್ಥಾನ ಪೊಲೀಸರನ್ನು ತನ್ನ ಕಾರಿನಲ್ಲಿ ಪಾಲನಪುರಕ್ಕೆ ಕರೆದೊಯ್ದಿದ್ದನೆನ್ನಲಾಗಿದ್ದ ಮಹಿಪಾಲ ಸಿಂಗ್ ಅವರು ಗುರುವಾರ ಉಲ್ಟಾ ಹೊಡೆದ ಸಾಕ್ಷಿಗಳಾಗಿದ್ದಾರೆ.
ಕಳ್ಳತನ ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಪ್ರಜಾಪತಿ ನಂತರ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಕೊಲೆ ಪ್ರಕರಣದಲ್ಲಿ ರಾಜಸ್ಥಾನದ ಉದಯಪುರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಆತನನ್ನು 2006,ಫೆಬ್ರುವರಿಯಲ್ಲಿ ಉಜ್ಜೈನ್ ನ್ಯಾಯಾಲಯಕ್ಕೆ ಕರೆತಂದಿದ್ದ ಸಂದರ್ಭದಲ್ಲಿ ತಾನು ಆತನನ್ನು ಭೇಟಿಯಾಗಿದ್ದೆ ಮತ್ತು ವಿಚಾರಣೆಯ ದಿನಾಂಕಗಳನ್ನು ತಪ್ಪಿಸದಂತೆ ಆತನಿಗೆ ತಿಳಿಸಿದ್ದೆ ಎಂದು ಸಿಬಿಐ ನ್ಯಾಯಾಧೀಶ ಎಸ್.ಜೆ.ಶರ್ಮಾ ಅವರ ಮುಂದೆ ತ್ರಿಪಾಠಿ ಹೇಳಿಕೆ ನೀಡಿದರು. ಆದರೆ ಆ ಭೇಟಿ ಸಂದರ್ಭದಲ್ಲಿ ಪ್ರಜಾಪತಿ ತೀವ್ರ ಒತ್ತಡದಲ್ಲಿದ್ದಂತೆ ಕಂಡುಬಂದಿದ್ದ ಎಂದು ತಾನೆಂದೂ ಸಿಬಿಐಗೆ ಹೇಳಿರಲಿಲ್ಲ ಎಂದು ತಿಳಿಸಿದರು.
ಗುಜರಾತ್ ಮತ್ತು ರಾಜಸ್ಥಾನ ಪೊಲೀಸರು ತನ್ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಬಹುದು ಎಂದು ತಾನು ಭಯಗೊಂಡಿದ್ದೇನೆ ಎಂದು ಪ್ರಜಾಪತಿ ತನಗೆ ಹೇಳಿದ್ದ ಎನ್ನುವುದನ್ನೂ ತ್ರಿಪಾಠಿ ನ್ಯಾಯಾಲಯದಲ್ಲಿ ನಿರಾಕರಿಸಿದರು. ಆತ ಪೊಲೀಸರ ಕಸ್ಟಡಿಯಿಂದ ಪರಾರಿಯಾಗಿದ್ದ ಎಂದರು. ಈ ಹೇಳಿಕೆಯ ಬಳಿಕ ನ್ಯಾ.ಶರ್ಮಾ ಅವರು ತ್ರಿಪಾಠಿಯನ್ನು ಪ್ರತಿಕೂಲ ಸಾಕ್ಷಿ ಎಂದು ಘೋಷಿಸಿದರು.
ತಾನು ಸ್ವಂತ ಕಾರು ಹೊಂದಿದ್ದೇನೆ ಎಂದ ಸಿಂಗ್,ಆದರೆ 2006,ಡಿಸೆಂಬರ್‌ನಲ್ಲಿ ತಾನು ರಾಜಸ್ಥಾನ ಪೋಲಿಸರನ್ನು ಹಿಮ್ಮತ್‌ನಗರದಿಂದ ಪಾಲನಪುರಕ್ಕೆ ಕರೆದೊಯ್ಯಿದ್ದೆ ಎನ್ನುವುದನ್ನು ನಿರಾಕರಿಸಿದರು.
ಪೋಲಿಸರು ಹೇಳುವಂತೆ ಪ್ರಜಾಪತಿ ಹಿಮ್ಮತ್‌ನಗರದ ಬಳಿ ಅವರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ.
ಪ್ರಕರಣದಲ್ಲಿ ಈವರೆಗೆ ಒಟ್ಟು 135 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, 85 ಜನರು ಪ್ರತಿಕೂಲ ಸಾಕ್ಷ ನುಡಿದಿದ್ದಾರೆ.
2005ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಗೆ ಪ್ರಯಾಣಿಸುತ್ತಿದ್ದಾಗ ಹೈದರಾಬಾದ್‌ನಲ್ಲಿ ಶೇಖ್ ಮತ್ತು ಆತನ ಪತ್ನಿ ಕೌಸರ್‌ಬಿಯನ್ನು ಗುಜರಾತ್ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ದಳವು ಅಪಹರಿಸಿತ್ತು ಎನ್ನಲಾಗಿದೆ. ಶೇಖ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು ಮತ್ತು ನಂತರ ಕೌಸರ್‌ಬಿ ಕಥೆಯನ್ನೂ ಪೂರೈಸಲಾಗಿತ್ತು ಎಂದು ಸಿಬಿಐ ಪ್ರತಿಪಾದಿಸಿದೆ. ಶೇಖ್ ಎನ್‌ಕೌಂಟರ್‌ಗೆ ಸಾಕ್ಷಿಯಾಗಿದ್ದನೆನ್ನಲಾದ ಆತನ ಸಹಾಯಕ ಪ್ರಜಾಪತಿಯನ್ನು 2006, ಡಿಸೆಂಬರ್‌ನಲ್ಲಿ ಗುಜರಾತ್‌ನ ಬನಾಸಕಾಂತಾ ಜಿಲ್ಲೆಯಲ್ಲಿ ಪೊಲೀಸರು ಕೊಂದು ಹಾಕಿದ್ದರು ಎಂದೂ ಅದು ಆರೋಪಿಸಿದೆ.
ಸಿಬಿಐ 38 ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು,ಈ ಪೈಕಿ 15 ಜನರು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.