ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಮನವಿ
ಉಡುಪಿ, ಜು. 12: ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ರಾಜ್ಯದ ರೈತರು ಮಾಡಿರುವ ಎಲ್ಲಾ ಸಾಲ ವನ್ನು ಮನ್ನಾ ಮಾಡಿ ಒಂದು ಬಾರಿ ರೈತರನ್ನು ಸಾಲದಿಂದ ಮುಕ್ತರಾಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ರೈತಮೋರ್ಚಾ ಇಂದು ಉಡುಪಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಬಜೆಟ್‌ಗೂ ಮುನ್ನ ರೈತ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾದ ಭರವಸೆ ನೀಡಿದ್ದು, ಈಗ ಮಾತು ಬದಲಿಸಿ ರೈತರ ಸುಸ್ತಿ ಸಾಲ ಮಾತ್ರ ಮನ್ನಾ ಎಂದು ಹಲವು ಷರತ್ತು ಹಾಕಿರುವುದನ್ನು ಟೀಕಿಸಿದ ರೈತ ಮೋರ್ಚಾ, ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಕಾಳಜಿ ಏನು ಎಂಬುದು ಅನುಮಾನಕ್ಕೆ ಎಡೆಮಾಡಿದೆ ಎಂದು ಮನವಿಯಲ್ಲಿ ಹೇಳಿದೆ.
ಜಿಲ್ಲೆಯ ಹೆಚ್ಚಿನ ರೈತರು ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲಗಳನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದ್ದು, 2018ರ ಮಾರ್ಚ್ 31ರವರೆಗೆ ಮರುಪಾವತಿ ಮಾಡಿರುವ ಎಲ್ಲಾ ರೈತರಿಗೂ ಸಾಲ ಮನ್ನಾದ ಪ್ರಯೋಜನ ದೊರಕಬೇಕು ಎಂದು ಆಗ್ರಹಿಸಲಾಗಿದೆ. ಇದರೊಂದಿಗೆ ಜಿಲ್ಲೆಯ ರೈತರ ಸಮಸ್ಯೆಗಳಾದ ಬಿತ್ತನೆ ಬೀಜದ ಕೊರತೆ, ನೆರೆ ಹಾವಳಿಯಿಂದ ಬೆಳೆ ಹಾನಿಯಾದ ರೈತರಿಗೆ ನೆರವುಗಳನ್ನು ತುರ್ತಾಗಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಉಡುಪಿಯ ಅಪರ ಜಿಲ್ಲಾಧಿಕಾರಿ ಅನುರಾಧ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತೀಶ್ ಶೆಟ್ಟಿ ಮುಟ್ಲುಪಾಡಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಶ್ರೀನಿವಾಸ ಶರ್ಮಾ, ಉಸ್ತುವಾರಿ ಕಟಪಾಡಿ ಶಂಕರ ಪೂಜಾರಿ, ನಾಗರಾಜ ಶೆಟ್ಟಿ ಕುಂಜೂರು, ಶಕುಂತಳಾ ನಾಯಕ್ ಅಮವಾಸೆಬೈಲು, ಸುರೇಂದ್ರ ಪೂಜಾರಿ ಮುನಿಯಾಲು, ಸತ್ಯರಾಜು ಬಿರ್ತಿ, ಕೇಶವ ಮರಾಠೆ ಕಾರ್ಕಳ, ಧೀರಜ್ ಕೆ.ಎಸ್., ಸರೋಜಿನಿ ಶೆಟ್ಟಿ ಕಾಪು, ಗಿರೀಶ್ ಅಡಿಗ ಹೇರೂರು, ಸತ್ಯನಾರಾಯಣ ಭಟ್ ಆರೂರು ಮುಂತಾದವರು ಉಪಸ್ಥಿತರಿದ್ದರು.