ಕೋಟೆಕಾರ್: ಮರ್ಕಝುಲ್ ಹುದಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನೆ

Update: 2018-07-12 15:21 GMT

ಉಳ್ಳಾಲ,ಜು.12: ಮಕ್ಕಳನ್ನು ಶಾಲೆಗೆ ಸೇರಿಸಿದ ಮಾತ್ರಕ್ಕೆ ಪೋಷಕರ ಜವಾಬ್ದಾರಿ ಮುಗಿಯುದಿಲ್ಲ, ಶಿಕ್ಷಕರಿಗಿಂತಲೂ ಹೆಚ್ಚಿನ ಜವಾಬ್ದಾರಿ ಪೋಷಕರಿಗೆ ಎಂದು ಕೋಟೆಕಾರ್ ಮಳ್‍ಹರ್ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಇದರ ಅಧ್ಯಕ್ಷ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ತಂಙಳ್ ಅಲ್‍ಬುಖಾರಿ ಹೇಳಿದರು. 

ಕೋಟೆಕಾರ್ ಮಳ್‍ಹರ್ ನಗರದಲ್ಲಿರುವ ಮಳ್‍ಹರ್ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಅಧೀನದ ಮರ್ಖಝುಲ್ ಹಿದಾಯ ಇನ್ಸ್‍ಟಿಟ್ಯೂಷನ್‍ನಲ್ಲಿ ಬುಧವಾರ ನಡೆದ ಶಿಕ್ಷಕ-ರಕ್ಷಕ ಸಭೆಯಲ್ಲಿ ಎಸೆಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. 

ಇಂದು ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶ, ವ್ಯವಸ್ಥೆಗಳಿವೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವನ್ನೂ ಪಡೆದಾಗ ಮಾತ್ರವೇ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು. 

ಸಂಸ್ಥೆಯ ಸಂಚಾಲಕ ಎನ್.ಎಸ್.ಉಮರಬ್ಬ ಮಾಸ್ಟರ್ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆಗಳು ಮುನ್ನಡೆಯಬೇಕಾದರೆ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಪೋಷಕರ ಸಂಪೂರ್ಣ ಸಹಕಾರ ಅಗತ್ಯ. ಪರಿಸರದ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವ ಉತ್ತಮ ಧ್ಯೇಯದೊಂದಿಗೆ ಆರಂಭಗೊಂಡ ಸಂಸ್ಥೆ ಇಂದು ಅಭಿವೃದ್ಧಿ ಮೆಟ್ಟಿಲು ಏರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಖತೀಜತುಲ್ ಕುಬ್ರಾ ಅವರಿಗೆ ಚಿನ್ನ, ನಗದು ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 

ಮಳ್‍ಹರ್ ಅಕಾಡೆಮಿ ಅಧ್ಯಕ್ಷ ಕೆ.ಎಂ.ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಪ್ರದಾನ ಕಾರ್ಯದರ್ಶಿ ಫಾರೂಕ್ ಯು.ಎಚ್, ಸದಸ್ಯ ಹಸನ್ ಕುಂಞಿ, ಮುಖ್ಯ ಶಿಕ್ಷಕಿ ಮುಮ್ತಾಝ್ ಅಫ್ಝಲ್ ಶೇಖ್ ಉಪಸ್ಥಿತರಿದ್ದರು. 
ಸದರ್ ಮುಅಲ್ಲಿಂ ಅಬ್ದುಲ್ ರಹ್‍ಮಾನ್ ಅಹ್ಸನಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News