ಬೆಳ್ಮ ಗ್ರಾಮ ಪಂಚಾಯತ್‍ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

Update: 2018-07-12 15:34 GMT

ಉಳ್ಳಾಲ,ಜು.12: ಬೆಳ್ಮ ಗ್ರಾಮ ಪಂಚಾಯತ್‍ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ದೇರಳಕಟ್ಟೆಯ ಬೆಳ್ಮ ಗ್ರಾಮಪಂಚಾಯತ್ ವಠಾರದಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮಸ್ಥರೊಬ್ಬರು ಬೆಳ್ಮ ಗ್ರಾಮದಲ್ಲಿ ಅಭಿವೃದ್ಧಿಯಾಗುತ್ತಿದ್ದರೂ ಮಾದಕ ವ್ಯಸನಿಗಳ ಕಾಟವೂ ಹೆಚ್ಚಾಗುತ್ತಿದೆ. ಒಳಪ್ರದೇಶಗಳಲ್ಲಿ ಗುಂಪುಗೂಡಿ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದರಿಂದ ಮಹಿಳೆಯರಿಗೆ, ಮಕ್ಕಳಿಗೆ ನಡೆದಾಡಲು ಕಷ್ಟವಾಗುತ್ತಿದೆ ಎಂದು ಆರೋಪಿಸಿದರು. 

ಬೆಳ್ಮ ಗ್ರಾ.ಪಂ.ನ ಒಳಪ್ರದೇಶಗಳ ರಸ್ತೆಗಳಲ್ಲಿ ಅಕ್ರಮ ಕೂಟ ಸೇರಿ ಮಾದಕ ದ್ರವ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಗ್ರಾಮದ ಅಭಿವೃದ್ಧಿಗೆ ಮಾರಕವಾಗುವಂತಹ ವಿಚಾರ. ಪಂ. ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿ  ಇಂತಹ ಅಕ್ರಮ ಚಟುವಟಿಕೆಗಳಿಗೆ ಗ್ರಾಮದಲ್ಲಿ ಕಡಿವಾಣ ಹಾಕುವಂತೆ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು. 

ಉತ್ತರಿಸಿದ ಕೊಣಾಜೆ ಪೊಲೀಸ್ ಠಾಣಾ ಸಿಬ್ಬಂದಿ ಭಾಸ್ಕರ್ ಇವರು ಗ್ರಾಮಸ್ಥರು ಮಾಹಿತಿ ನೀಡಿದಲ್ಲಿ ಕೂಡಲೇ ತಪ್ಪಿತಸ್ಥರನ್ನು ಹಿಡಿಯಲು ಸಹಕಾರವಾಗುತ್ತದೆ. ಈ ಹಿಂದೆ ರೆಂಜಾಡಿ, ಬೆಳ್ಮ ಭಾಗದಲ್ಲಿ ಗಾಂಜಾ ಸೇವನೆ ನಡೆಸುತ್ತಿದ್ದವರನ್ನು ಬಂಧಿಸಲಾಗಿತ್ತು. ವಿಪರ್ಯಾಸವೆಂದರೆ ಕಾನೂನಿನಡಿ ಸಣ್ಣ ಪ್ರಮಾಣದ ಗಾಂಜಾ ಇರುವವರಿಗೆ ಸಣ್ಣ ಪ್ರಮಾಣದ ಶಿಕ್ಷೆ ಆಗುತ್ತಿದೆ. ಇದರಿಂದ ಶಿಕ್ಷೆ ಅನುಭವಿಸಿ ಮತ್ತೆ ದುಶ್ಚಟವನ್ನು ಮುಂದುವರಿಸುವಂತಹ ಕಾರ್ಯ ಆಗುತ್ತಿದೆ ಎಂದರು. 

ಮೆಸ್ಕಾಂನಲ್ಲಿ ದೂರು ನೀಡಲು ಕರೆ ಮಾಡಿದರೆ  ದೂರವಾಣಿ ಎಂಗೇಜ್ ಆಗಿಯೇ ಇರುತ್ತದೆ. ಇದರಿಂದ ದೂರು ನೀಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು  ಕೂಡಲೇ ಗಮನಹರಿಸಬೇಕಿದೆ. ಎರಡು ಜೀಪುಗಳು ಮಾತ್ರವೇ ಇಲಾಖೆಯಲ್ಲಿರುವುದು, ಇದರಿಂದ  ಹಲವೆಡೆ ದೂರುಗಳು ಇದ್ದಲ್ಲಿ ಬೆಳ್ಮ ವ್ಯಾಪ್ತಿಗೆ ಬರುವಾಗ ಸಿಬ್ಬಂದಿ ವಿಳಂಬವಾಗಿ, ಹಲವು  ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ತೊಂದರೆಗೀಡಾಗುತ್ತಿದ್ದೇವೆ.  ಖಾಸಗಿ ವಸತಿ ಸಂಕೀರ್ಣದಿಂದ ಕೊಳಚೆ ನೀರು ಗ್ರಾಮಕ್ಕೆ ಬರುತ್ತಿದೆ. ಚರಂಡಿಯಿಲ್ಲದೆ ತೋಡಿನಲ್ಲೇ ಹರಿಯುತ್ತಿದ್ದು, ಇದರಿಂದಾಗಿ  ಜನರಲ್ಲಿ ಅನಾರೋಗ್ಯಕ್ಕೆ ಈಡಾಗುವ ಆತಂಕ ಇದೆ.  ಸಮೀಪದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯಲ್ಲಿ ಡೆಂಗ್ಯು ಜ್ವರವೂ ಕಾಣಿಸಿಕೊಂಡಿದೆ. ಕೂಡಲೇ ಪಂಚಾಯತ್ ಆಡಳಿತ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಬೇಕಿದೆ ಎಂದರು . ಒಳಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಆದರೆ  ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ, ನೀರು  ರಸ್ತೆಯಲ್ಲಿ ಹರಿಯುತ್ತಾ ಮನೆ ಅಂಗಳಗಳಿಗೆ ಬರುತ್ತಿದೆ .  

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಮಾತನಾಡಿ ಗ್ರಾಮದ ಅಭಿವೃದ್ಧಿ ಪ್ರತಿ ಪಂಚಾಯತ್ ಸದಸ್ಯರು ಅನುದಾನಗಳನ್ನು ಸರಿಯಾಗಿ ವಿನಿಯೋಗಿಸುವ ಮೂಲಕ ಹಲವು ಯೋಜನೆಗಳನ್ನು ತರಲು ಸಾಧ್ಯವಾಗಿದೆ.  ಸಾರ್ವಜನಿಕರಿಗೆ ಅನುಕೂಲವಾಗುವಂತಹ  ಹಲವು ಯೋಜನೆಗಳನ್ನು  ಕ್ಷೇತ್ರದ ಶಾಸಕರಿಂದ ಸಾಧ್ಯವಾಗಿದ್ದು, ಮುಂದೆಯೂ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ. ಗ್ರಾಮಸ್ಥರು ಸಹಕರಿಸಿದಲ್ಲಿ ಹಲವೆಡೆ ಅರ್ಧದಲ್ಲಿ  ಬಾಕಿ ಉಳಿದ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಎಂದರು. 

ನೋಡೆಲ್ ಅಧಿಕಾರಿಯಾಗಿ ವಲಯ ಅರಣ್ಯ ಅಧಿಕಾರಿ ಚಿದಾನಂದ್ ಭಾಗವಹಿಸಿದ್ದರು.  ಪಂಚಾಯತ್ ಅಧ್ಯಕ್ಷೆ ವಿಜಯ  ಅಧ್ಯಕ್ಷತೆ ವಹಿಸಿದ್ದರು.  ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News