ನೆರೆ ಅನಾಹುತ ನಿರ್ವಹಿಸಲು ದೇಶಾದ್ಯಂತ 71 ಸ್ಥಳಗಳಲ್ಲಿ 100 ಎನ್‌ಡಿಆರ್‌ಎಫ್ ತಂಡ ನಿಯೋಜನೆ
ಹೊಸದಿಲ್ಲಿ, ಜು. 12: ಭಾರೀ ಮಳೆ ಹಾಗೂ ನೆರೆ ಅನಾಹುತ ನಿರ್ವಹಿಸಲು ದೇಶಾದ್ಯಂತ 71 ಸ್ಥಳಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ 4,500 ಸಿಬ್ಬಂದಿ ಹೊಂದಿದ ಸುಮಾರು 100 ತಂಡಗಳನ್ನು ನಿಯೋಜಿಸಲಾಗಿದೆ. ಎಲ್ಲ ಎನ್‌ಡಿಆರ್‌ಎಫ್ ಬೆಟಾಲಿಯನ್‌ನಲ್ಲಿ ಹೆಚ್ಚುವರಿ ತಂಡ ಕೂಡ ಸಿದ್ದವಾಗಿ ಇರಲಿದೆ. ಅಗತ್ಯಕ್ಕೆ ಅನುಗುಣವಾಗಿ ತಂಡವನ್ನು ನಿಯೋಜಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ನೆರೆ ಪೀಡಿತ ಜನರನ್ನು ರಕ್ಷಿಸಲು ಹಾಗೂ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ದೇಶಾದ್ಯಂತ ಕನಿಷ್ಠ 14 ರಾಜ್ಯಗಳ 71 ಸ್ಥಳಗಳಲ್ಲಿ ಎನ್‌ಡಿಆರ್‌ಎಫ್‌ನ 97 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಂಡದಲ್ಲಿ ಎನ್‌ಡಿಆರ್‌ಎಫ್‌ನ 45 ಅಧಿಕಾರಿಗಳು ಇರಲಿದ್ದಾರೆ. ಈ ತಂಡ ಭಾರತ ಹವಾಮಾನ ಇಲಾಖೆ, ಕೇಂದ್ರ ಜಲ ಆಯೋಗ ಹಾಗೂ ಇತರ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳಲಿದೆ. ಸಮಸ್ಯೆ ಸಂದರ್ಭ ಸಮಯದ ಒಳಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಬೆಟಾಲಿಯನ್‌ನ ಕಮಾಂಡರ್‌ಗಳು ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕ ಇರಿಸಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
24x4 ದಿಲ್ಲಿಯಲ್ಲಿರುವ ಎನ್‌ಡಿಆರ್‌ಎಫ್‌ನ ನಿಯಂತ್ರಣ ಕೊಠಡಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಿದೆ ಎಂದು ಅವರು ತಿಳಿಸಿದ್ದಾರೆ.
ನೆರೆಯಿಂದ ಉದ್ಬವಿಸುವ ಯಾವುದೇ ಪರಿಸ್ಥಿತಿ ಎದುರಿಸಲು ವಿಪತ್ತು ತುರ್ತು ಪಡೆ ಸಜ್ಜಾಗಿ ಇರಲಿದೆ ಹಾಗೂ ದೇಶಾದ್ಯಂತದ ತೀವ್ರ ನೆರೆ ಪೀಡಿತ ಪ್ರದೇಶಗಳಿಗೆ ತಂಡವನ್ನು ಕಳುಹಿಸಿಕೊಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.