ತೆರಿಗೆ ದಾವೆಗಳಿಗೆ ಕನಿಷ್ಠ ಹಣಕಾಸು ಮಿತಿಯ ಹೆಚ್ಚಳ: 29,000ಕ್ಕೂ ಅಧಿಕ ಪ್ರಕರಣಗಳ ಹಿಂದೆಗೆತ

Update: 2018-07-12 16:53 GMT

ಹೊಸದಿಲ್ಲಿ,ಜು.12: ನ್ಯಾಯಾಧಿಕರಣಗಳು ಮತ್ತು ನ್ಯಾಯಾಲಯಗಳಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲು ಕನಿಷ್ಠ ಹಣಕಾಸು ಮಿತಿಯನ್ನು ಹೆಚ್ಚಿಸಲು ಸರಕಾರವು ನಿರ್ಧರಿಸಿದ್ದು,ತೆರಿಗೆ ದಾವೆಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಹಣದ ಮೊತ್ತವು 5,600 ಕೋ.ರೂ.ಗಳಷ್ಟು ಕಡಿಮೆಯಾಗಲಿದೆ ಎಂದು ವಿತ್ತಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

2017,ಮಾರ್ಚ್‌ಗೆ ಇದ್ದಂತೆ ನ್ಯಾಯಾಧಿಕರಣಗಳು,ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿರುವ ತೆರಿಗೆ ದಾವೆಗಳಲ್ಲಿ 7.6 ಲ.ಕೋ.ರೂ.ಗಳಷ್ಟು ತೆರಿಗೆ ವಿವಾದ ಮೊತ್ತವು ಸಿಕ್ಕಿಹಾಕಿಕೊಂಡಿದೆ ಎಂದರು.

ದಾವೆಗಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಸರಕಾರವು ಬುಧವಾರ ನ್ಯಾಯಾಧಿಕರಣಗಳಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲು ವಿವಾದಿತ ತೆರಿಗೆ ಮೊತ್ತವನ್ನು ಕನಿಷ್ಠ 20 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಈ ಮೊತ್ತವನ್ನು ಉಚ್ಚ ನ್ಯಾಯಾಲಯಗಳಿಗೆ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಅನುಕ್ರಮವಾಗಿ 50 ಲ.ರೂ. ಮತ್ತು ಒಂದು ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಇದಕ್ಕೂ ಮುನ್ನ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮೆಟ್ಟಿಲನ್ನೇರಲು ವಿವಾದಿತ ಮೊತ್ತದ ಕನಿಷ್ಠ ಮಿತಿಯನ್ನು 10 ಲ.ರೂ.ಗಳಿಗೆ ನಿಗದಿಗೊಳಿಸಲಾಗಿತ್ತು. ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಈ ಮಿತಿ ಅನುಕ್ರಮವಾಗಿ 20 ಲ.ರೂ ಮತ್ತು 25 ಲ.ರೂ.ಗಳಾಗಿದ್ದವು.

ಸರಕಾರದ ಈ ನಿರ್ಧಾರದಿಂದ ದಾವೆಗಳ ಸಂಖ್ಯೆಯು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯಲ್ಲಿ ಶೇ.41ರಷ್ಟು ಮತ್ತು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸೀಮಾಶುಲ್ಕ ಮಂಡಳಿಯಲ್ಲಿ ಶೇ.18ರಷ್ಟು ತಗ್ಗಲಿವೆ.

  ವಿವಿಧ ದಾವೆ ವೇದಿಕೆಗಳಿಂದ ಒಟ್ಟು 29,580 ಪ್ರಕರಣಗಳನ್ನು ಹಿಂದೆಗೆದುಕೊಳ್ಳಲಾಗುತ್ತಿದ್ದು, ಇದರಿಂದ ತೆರಿಗೆ ವಿವಾದಗಳ ಸಂಖ್ಯೆ ಶೇ.37ರಷ್ಟು ಕಡಿಮೆಯಾಗಲಿದೆ.

ಉದ್ಯಮ ನಿರ್ವಹಣೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕನಿಷ್ಠ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಗೋಯಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News