‘ಉನ್ನತ ಶಿಕ್ಷಣದಲ್ಲಿ ಸಹಭಾಗಿತ್ವಕ್ಕೆ ಭಾರತ-ಇಯು ಆದ್ಯತೆ’

Update: 2018-07-12 16:54 GMT

ಮಣಿಪಾಲ, ಜು.12: ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಭಾರತ- ಯುರೋಪಿಯನ್ ಒಕ್ಕೂಟದ ಶೃಂಗಸಭೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಹಭಾಗಿತ್ವಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುರೋಪಿಯನ್ ಕಮಿಷನ್‌ನ ಅಧ್ಯಕ್ಷ ಜೀನ್ ಕ್ಲಾಡ್ ಜುಂಕರ್ ಮತ್ತು ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷ ಡೋನಾಲ್ಡ್ ಟಸ್ಕ್ ಹೆಚ್ಚಿನ ಬದ್ಧತೆಯನ್ನು ಘೋಷಿಸಿದ್ದಾರೆ ಎಂದು ಭಾರತದಲ್ಲಿ ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳ ಪ್ರಬಾರ ಮುಖ್ಯಸ್ಥ ರೇಮುಂಡ್ ಮಾಗಿಸ್ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ವಿವಿಯ ಆಶ್ರಯದಲ್ಲಿ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಇಂದು ಪ್ರಾರಂಭಗೊಂಡ ಮೂರು ದಿನಗಳ ‘ಮಣಿಪಾಲ ಉನ್ನತ ಶಿಕ್ಷಣ ಸಮಾವೇಶ’ದ ಉದ್ಘಾಟನಾ ಸಮಾರಂಭದಲ್ಲಿ ನೀಡಿದ ವೀಡಿಯೊ ಸಂದೇಶದಲ್ಲಿ ಅವರು ವಿಷಯ ತಿಳಿಸಿದ್ದಾರೆ.

ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಯುರೋಪಿಯನ್ ಒಕ್ಕೂಟದ ಬೆಂಬಲ ಕಾರ್ಯಕ್ರಮದಿಂದಾಗಿ ಭಾರತದ 120ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳು ತಮ್ಮ ಸುಧಾರಣಾ ಪ್ರಕ್ರಿಯೆಗಳಿಗೆ ವೇಗವನ್ನು ನೀಡುವ ಪ್ರಯತ್ನದಲ್ಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸಂಪರ್ಕ ಹಾಗೂ ಸ್ಪರ್ಧಾತ್ಮಕವಾಗಿರಲು ಸನ್ನದ್ಧವಾಗಿವೆ ಎಂದು ಮಾಗಿಸ್ ನುಡಿದರು.

ಮೂರು ದಿನಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ, ಜರ್ಮನಿಯ ಎಚ್. ಬ್ರಿಮನ್ ಯುನಿವರ್ಸಿಟಿ ಆಫ್ ಅಪ್ಲೈಡ್ ಸಾಯನ್ಸ್‌ನ ನಿವೃತ್ತ ವೈಸ್ ರೆಕ್ಟರ್ ಪ್ರೊ.ಫ್ರೆಡ್ರಿಚ್ ಲೇಹ್‌ಮನ್, ಕಳೆದ ಮೂರು ದಶಕಗಳಿಂದ ಬ್ರಿಮನ್ ಮತ್ತು ಮಣಿಪಾಲ ನಡುವೆ ವಿವಿಧ ಕ್ಷೇತ್ರಗಳಲ್ಲಿ ಬೆಳೆದಿರುವ ಪರಸ್ಪರ ಸಹಕಾರದ ಕುರಿತು ಹರ್ಷ ವ್ಯಕ್ತಪಡಿಸಿದರಲ್ಲದೇ, ಅವಕಾಶಗಳ ಅಂತಾರಾಷ್ಟ್ರೀಕರಣದಿಂದ ಯುವಜನತೆಗೆ ತಮ್ಮ ಪ್ರತಿಭೆಗಳನ್ನು ವಿಶ್ವ ಮಟ್ಟದಲ್ಲಿ ತೋರಿಸಲು ಅವಕಾಶಗಳು ಲಭ್ಯವಾಗುತ್ತಿವೆ. ಇದರಿಂದ ಶಾಂತಿ ಮತ್ತು ಸೌಹಾರ್ದತೆಯ ಉತ್ತಮ ಜಗತ್ತು ಕುಡಿಯೊಡೆಯುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆಯ ಕುಲಪತಿ ಡಾ.ಎಚ್.ವಿನೋದ್ ಭಟ್ ಮಾತನಾಡಿ, ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣದಿಂದ ಶೈಕ್ಷಣಿಕವಾಗಿ ಹೊಸ ಸಾಧ್ಯತೆಗಳು, ವಿಸ್ತರಣೆಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ಹೆಚ್ಚೆಚ್ಚು ಸಂಪರ್ಕ, ಸೇತುವೆ ಹಾಗೂ ಪಾಲುದಾರಿಕೆ ಸಾಧ್ಯವಾಗುತ್ತಿವೆ ಎಂದರು.

ಜರ್ಮನಿಯ ಬರ್ಲಿನ್ ಟೆಕ್ನಿಕಲ್ ವಿವಿಯ ನಿವೃತ್ತ ಚಾನ್ಸಲರ್ ಉಲ್ರಿಚ್ ಪೊಡ್ವೆಲ್ ಅವರು ಪ್ರಧಾನ ಭಾಷಣದಲ್ಲಿ ಅಂತಾರಾಷ್ಟ್ರೀಕರಣದ ಸಂಕೀರ್ಣತೆ ಹಾಗೂ ಸಂದರ್ಭಗಳ ಕುರಿತು ಸೋದಾಹರಣವಾಗಿ ಮಾತನಾಡಿದರು. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಪದವಿ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಮಾಹೆಯ ಯುರೋಪಿಯನ್ ಸ್ಟಡಿ ಸೆಂಟರ್‌ನ ನಿರ್ದೇಶಕಿ ಹಾಗೂ ಸಮಾವೇಶದ ಸಂಚಾಲಕಿ ಡಾ.ನೀತಾ ಇನಾಂದಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂಟರ್‌ನೇಶನಲ್ ಕೊಲಬರೇಷನ್ಸ್‌ನ ನಿರ್ದೇಶಕ ಡಾ.ರಘು ರಾಧಾಕೃಷ್ಣನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News