×
Ad

ರಾಜ್ಯ ವಿಭಜನೆ, ಪ್ರತ್ಯೇಕತೆ ಕೂಗು ಬಂದರೆ ರಾಜ್ಯ ಸರಕಾರ ಹೊಣೆ : ಬಜೆಟ್ ಭಾಷಣದಲ್ಲಿ ಕೋಟ

Update: 2018-07-12 22:29 IST

ಉಡುಪಿ, ಜು.12: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಜೆಟ್ ಮಂಡಿಸುವ ಸಮಯದಲ್ಲೇ ಸಂದಿಗ್ಧ ಪರಿಸ್ಥಿತಿ ಎದುರಾಗಿ ಕೇವಲ 4 ಜಿಲ್ಲೆಗಳಿಗೆ ಪೂರಕ ಬಜೆಟನ್ನು ಮಂಡಿಸಿದ್ದನ್ನು ಬಿಟ್ಟರೆ ಈ ಬಜೆಟ್‌ನಲ್ಲಿ, ಎಲ್ಲಾ ಜಿಲ್ಲೆಗಳಿಗೆ ಪೂರಕವಾದ ಮತ್ತು 6 ಕೋಟಿ ಜನರ ಆಶಯಕ್ಕೆ ಪೂರಕವಾದ ಬಜೆಟ್ ಇದಾಗಿರಲಿಲ್ಲ. ಒಂದು ರೀತಿಯಲ್ಲಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ‘ಗಜ ಪ್ರಸವ’ದಂತಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸದನದಲ್ಲಿ ಬಜೆಟ್ ಮೇಲೆ ಭಾಷಣ ಮಾಡುತ್ತಾ ಆಡಳಿತ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕುಮಾರಸ್ವಾಮಿ ಬಜೆಟ್ ಮಂಡಿಸುವಾಗ ಸರಕಾರ ತಾಯಿಯಿದ್ದಂತೆ ಎಂದು ಹೇಳಿದ ಮಾತನ್ನು ಪುನರುಚ್ಚಿಸಿ, ಸರಕಾರ ತಾಯಿಯಾದರೆ ಯಾಕೆ ನೀವು ಮಲತಾಯಿ ಧೋರಣೆಯನ್ನು ತೋರಿಸುತ್ತೀರಿ ಎಂದು ಪ್ರಶ್ನಿಸಿದರು. ಕೇವಲ 4 ಜಿಲ್ಲೆಗಳಿಗೆ ಪೂರಕವಾದ ಬಜೆಟನ್ನು ಮಂಡಿಸಿ ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರಿಗೆ ಯಾವುದೇ ಘೋಷಣೆ ಮಾಡದೇ ಮಲತಾಯಿ ಧೋರಣೆ ತೋರಿರುವುದು ಸರಿಯೇ ಎಂದರು.

ಇಂಥ ಅಸಮಾನತೆಯಿಂದಾಗಿ ರಾಜ್ಯ ವಿಭಜನೆ ಇಲ್ಲವೇ ಪ್ರತ್ಯೇಕತೆಯ ಕೂಗು ಕೇಳಿ ಬಂದರೇ ಅದರ ನೇರ ಹೊಣೆ ಕುಮಾರಸ್ವಾಮಿ ನೇತೃತ್ವದ ಸರಕಾರದ್ದು ಮತ್ತು ಆ ಸರಕಾರವನ್ನು ಬೆಂಬಲಿಸಿದ ಕಾಂಗ್ರೆಸ್‌ನದ್ದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಿಕ್ಷಣ ಇಲಾಖೆಯು 28,000 ಶಾಲೆಗಳನ್ನು ಬೇರೆ ಶಾಲೆಗಳೊಂದಿಗೆ ವಿಲೀನ ಮಾಡಲು ಹೊರಟು ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚಲು ಹೊರಟಿದೆ. ರಾಜ್ಯದಲ್ಲಿ ಬಡವರ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ಕಾಯ್ದೆಯಡಿಯಲ್ಲಿ ತಂದ ಆರ್‌ಟಿಇ ಕಾಯಿದೆ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗದೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಶಿಕ್ಷಣ ಸಚಿವರು ಗಮನ ಹರಿಸಬೇಕು ಎಂದರು. ಶಾಲೆ ಪ್ರಾರಂಭವಾಗಿ ಸುಮಾರು 2 ತಿಂಗಳು ಕಳೆದರೂ ರಾಜ್ಯದ ಶೇ.75 ರಷ್ಟು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆಯಾಗಿಲ್ಲ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News