ಪಿ. ಲಂಕೇಶರ ನಾಟಕ ಕೊಂಕಣಿಯಲ್ಲಿ ಯಶಸ್ವಿಯಾಗಿ ಪ್ರದರ್ಶನ

Update: 2018-07-12 18:32 GMT

ಮಂಗಳೂರು,ಜು.12:ಪಿ. ಲಂಕೇಶ್ ಬರೆದ ಟಿ. ಪ್ರಸನ್ನನ ಗ್ರಹಸ್ಥಾಶ್ರಮ ನಾಟಕ ರೋಶು ಬಜ್ಪೆಯವರು ಕೊಂಕಣಿಯಲ್ಲಿ ‘ಹೋಂ ಸ್ವೀಟ್ ಹೋಂ' ಎಂದು ಅನುವಾದಿಸಿದ್ದನ್ನು ಅಸ್ತಿತ್ವ (ರಿ.) ಮಂಗಳೂರು ಇದರ ಕಲಾವಿದರು ಪಾದುವ ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದರು.

ಅಸಂಗತ ಶೈಲಿಯಲ್ಲಿರುವ ಈ ನಾಟಕದ ರಚನೆ ಅರವತ್ತರ ದಶಕದಲ್ಲಿ ನಡೆದಿದ್ದರೂ ಜೀವನದಲ್ಲಿ ನಾವು ಎದುರಿಸುವ ಸಂದಿಗ್ಧತೆಯು ಇನ್ನೂ ಹಾಗೇ ಇದೆ, ಏನೂ ಬದಲಾಗಿಲ್ಲ ಎಂಬ ಕಥಾಹಂದರವನ್ನು ಈ ನಾಟಕಒಳಗೊಂಡಿತ್ತಲ್ಲದೇ, ಕೊಂಕಣಿಯಲ್ಲಿ ಅಸಂಗತ ನಾಟಕಗಳಿಗೆ ಅವಕಾಶವಿದೆ, ಚೆಂದವಾಗಿ ಮೂಡಿಬಂದ ನಾಟಕವನ್ನು  ಪ್ರೇಕ್ಷಕ ವರ್ಗ ಖಂಡಿತ ಒಪ್ಪಿಕೊಳ್ಳುತ್ತದೆ ಎಂಬುವುದನ್ನು ಈ ನಾಟಕ ಸಾಬೀತುಪಡಿಸಿತು. 

ಕಾಲೇಜಿನ ಸಭಾಂಗಣದಲ್ಲಿ ಮೊದಲ ಸಲ ಆಪ್ತ ರಂಗಭೂಮಿಯ ಮಾದರಿಯಲ್ಲಿ ಈ ನಾಟಕವನ್ನು ಪಾದುವ ರಂಗ ಅಧ್ಯಯನ ಕೇಂದ್ರದ ಸಹಕಾರದೊಂದಿಗೆ  ಪ್ರದರ್ಶಿಸಲಾಯಿತು. ನಾಟಕದ ಬಳಿಕ ಕೃತಿ ಹಾಗೂ ನಾಟಕದ ಬಗ್ಗೆ ವಿಚಾರ ವಿನಿಮಯವನ್ನು ಏರ್ಪಡಿಸಲಾಗಿತ್ತು. ಆಹ್ವಾನಿತರಿಗೆ ಮಾತ್ರ ಪ್ರವೇಶವಿದ್ದ ಈ ನಾಟಕ ಪ್ರದರ್ಶನಕ್ಕೆ ಸಾಹಿತಿಗಳು, ನಾಟಕಕಾರು ಸೇರಿದಂತೆ ಧಾರ್ಮಿಕ ಗುರುಗಳು, ಹಾಗೂ ನೂತನವಾಗಿ ನೇಮಕವಾದ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾರವರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಮೊದಲು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯದ ನಾನಾ ರಂಗ ಶಿಕ್ಷಣ ಕೇಂದ್ರದ ಪ್ರಸಕ್ತ ವರ್ಷದ ರಂಗ ತರಬೇತಿಗೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಶುಭ ಕೋರಿ ಸನ್ಮಾನಿಸಲಾಯಿತು. ಪುತ್ತೂರು ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಝೇವಿಯರ್ ಡಿಸೋಜಾ ಅಸ್ತಿತ್ವ ತಂಡಕ್ಕೆ ಶುಭಕೋರಿದರೆ, ಪಾದುವ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾ. ಆಲ್ವಿನ್ ಸೆರಾವೊರವರು ಕಾರ್ಯಕ್ರಮ ನಿರ್ವಹಿಸಿದರು. ಇದು ಈ ನಾಟಕದ ಎರಡನೇ ಪ್ರದರ್ಶನ, ಮೊದಲ ಪ್ರದರ್ಶನ ಮುದ್ರಾಡಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ 
ಜರುಗಿತ್ತು. ಇದು ಅಸ್ತಿತ್ವ ತಂಡದ ಮೊದಲ ನಾಟಕವೂ ಹೌದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News