×
Ad

ಬಜೆಟ್‌ನಲ್ಲಿ ನಿರ್ಲಕ್ಷ್ಯ: ಮಹಿಳಾ ಮೀನು ಮಾರಾಟಗಾರರಿಂದ ವಿನೂತನ ಪ್ರತಿಭಟನೆ

Update: 2018-07-13 17:04 IST

ಉಡುಪಿ, ಜು.13: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೀನುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದಾಗಿ ಆರೋಪಿಸಿ ಉಡುಪಿ ತಾಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ವತಿಯಿಂದ ಶುಕ್ರವಾರ ಉಡುಪಿ ಮೀನು ಮಾರುಕಟ್ಟೆಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ನೂರಾರು ಮಹಿಳೆಯರು ತಮ್ಮ ಮೀನಿನ ಬುಟ್ಟಿಗಳ ಎದುರು ಬಜೆಟ್‌ನಲ್ಲಿ ಮೀನುಗಾರರನ್ನು ನಿರ್ಲಕ್ಷಿಸಿ ರುವ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಬರಹಗಳಿರುವ ಫಲಕಗಳನ್ನು ಪ್ರದರ್ಶಿಸಿದರು.

‘ಮೂರು ಜಿಲ್ಲೆಗಳ ಮುಖ್ಯಮಂತ್ರಿ ಕುಮಾರಸ್ವಾಮಿಗೆ ದಿಕ್ಕಾರ’ ಕಡಲ್ಕೊರೆತ ಸಮಸ್ಯೆ ಬಗ್ಗೆ ಕುಮಾರಸ್ವಾಮಿ ಯಾಕೆ ತುಟಿ ಬಿಚ್ಚುತ್ತಿಲ್ಲ’, ‘ಮೀನುಗಾರರ ಸಮಸ್ಯೆಗೆ ಸ್ಪಂದಿಸದ ಸಬ್ಸಿಡಿ ದರದಲ್ಲಿ ಡಿಸೇಲ್ ನೀಡದೆ, ಡಿಸೇಲ್ ಬೆಲೆ ಏರಿಸದ ಬಜೆಟ್ ನಮಗೆ ಬೇಕಿಲ್ಲ’, ‘ರಾಜ್ಯದ ಬೊಕ್ಕಸಕ್ಕೆ ಕರಾವಳಿಗರಿಗೆ ಪಾಲಿಲ್ಲವೇ’, ‘ಮೀನುಗಾರ ಮಹಿಳೆಯರ ಸಾಲ ಮನ್ನಾ ಯಾಕೆ ಮಾಡುತ್ತಿಲ್ಲ’, ‘ಮೀನುಗಾರರಿಗೆ ದ್ರೋಹ ಮಾಡಿದ ಕುಮಾರಸ್ವಾಮಿಗೆ ದಿಕ್ಕಾರ’ ಎಂಬ ಬಹರಗಳು ಇರುವ ಫಲಕಗಳನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಡುಪಿ ತಾಲೂಕು ಅಧ್ಯಕ್ಷೆ ಬೇಬಿ ಎಸ್. ಸಾಲ್ಯಾನ್ ಮಾತನಾಡಿ, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೀನುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರೈತರ ಹಾಗೆ ನಾವು ಕೂಡ ಕಷ್ಟ ಪಟ್ಟು ದುಡಿಯುವುದರಿಂದ ನಮಗೂ ಸೌಲಭ್ಯಗಳನ್ನು ನೀಡಬೇಕು. ಮೀನುಗಾರರ ಸಾಲ ಮನ್ನಾ ಮಾಡಬೇಕು ಮತ್ತು ಮಹಿಳಾ ಮೀನು ಮಾರಾಟಗಾರರಿಗೆ ಬಡ್ಡಿರಹಿತವಾಗಿ ತಲಾ 25,000ರೂ. ಸಾಲ ನೀಡಬೇಕೆಂದು ಆಗ್ರಹಿಸಿದರು.

‘ಮೀನುಗಾರರು ರೈತರಂತೆ ತುಂಬಾ ನಷ್ಟದಲ್ಲಿದ್ದಾರೆ. ನಾವು ಕೂಡ ಇಡೀ ಕುಟುಂಬವನ್ನು ನಿರ್ವಹಣೆ ಮಾಡಬೇಕು. ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದೆ. ಬಜೆಟ್‌ನಲ್ಲಿ ಯಾವುದೇ ಸೌಲಭ್ಯ ನೀಡದ ಕುಮಾರಸ್ವಾಮಿಗೆ ನಮ್ಮ ಮೇಲೆ ಯಾಕೆ ಸಿಟ್ಟು ಎಂಬುದು ಗೊತ್ತಾಗುತ್ತಿಲ್ಲ. ಅದೇ ರೀತಿ ಮರಳಿನ ಸಮಸ್ಯೆ ಹಾಗೂ ಸಿಆರ್‌ಝೆಡ್ ಸಮಸ್ಯೆಯನ್ನು ಕೂಡ ಸರಕಾರ ಬಗೆಹರಿಸಬೇಕು ಎಂದು ಚಂದ್ರವತಿ ಸಾಲ್ಯಾನ್ ಉಪ್ಪೂರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಹಸಿಮೀನು ಮಾರಾಟಗಾರರ ಸಂಘದ ಪ್ರಮುಖರಾದ ಸರಸ್ವತಿ ಕರ್ಕೇರ, ಲೀಲಾ ಕುಂದರ್, ವಿಜಯ, ಗೀತಾ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News