ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಮುಹಮ್ಮದ್ ಕೈಫ್ ನಿವೃತ್ತಿ

Update: 2018-07-13 14:40 GMT

ಹೊಸದಿಲ್ಲಿ, ಜು.13: ಭಾರತದ ಕ್ರಿಕೆಟಿಗ ಮುಹಮ್ಮದ್ ಕೈಫ್ ಶುಕ್ರವಾರ ಎಲ್ಲ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

12 ವರ್ಷಗಳ ಹಿಂದೆ ಟೀಮ್ ಇಂಡಿಯಾದ ಪರ ಕೊನೆಯ ಪಂದ್ಯ ಆಡಿದ್ದ ಕೈಫ್ ಚುರುಕಿನ ಫೀಲ್ಡಿಂಗ್ ಹಾಗೂ ಕೆಳ ಕ್ರಮಾಂಕದ ಬ್ಯಾಟಿಂಗ್‌ನಿಂದ ತಂಡಕ್ಕೆ ಆಸರೆಯಾಗುತ್ತಿದ್ದರು. 2000ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಬೆಂಗಳೂರಿನಲ್ಲಿ ಚೊಚ್ಚಲ ಟೆಸ್ಟ್ ಆಡಿದ್ದ ಕೈಫ್ 2006ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. 2002ರಲ್ಲಿ ಇಂಗ್ಲೆಂಡ್ ವಿರುದ್ದ ಕಾನ್ಪುರದಲ್ಲಿ ಮೊದಲ ಏಕದಿನ ಕ್ರಿಕೆಟ್ ಆಡಿದ್ದ ಕೈಫ್ 2006ರಲ್ಲಿ ದ.ಆಫ್ರಿಕ ವಿರುದ್ಧವೇ ಕೊನೆಯ ಪಂದ್ಯ ಆಡಿದ್ದರು.

 37ರ ಹರೆಯದ ಕೈಫ್ ಭಾರತದ ಪರ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2002ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ನಾಟ್‌ವೆಸ್ಟ್ ಟ್ರೋಫಿ ಫೈನಲ್‌ನಲ್ಲಿ ಕೈಫ್ 87 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.ಕೈಫ್ ಅವರ ಈ ಇನಿಂಗ್ಸ್ ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತ್ತು. ‘‘ಇಂದು ನಾನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಲಿಖಿತ ಬರಹದ ಮೂಲಕ ತಿಳಿಸುತ್ತಿರುವೆ’’ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಹಾಗೂ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಭಾರತದ ಅಂಡರ್-19 ತಂಡ 2000ರಲ್ಲಿ ಚೊಚ್ಚಲ ಚಾಂಪಿಯನ್ ಪ್ರಶಸ್ತಿ ಜಯಿಸಿದ್ದಾಗ ಕೈಫ್ ತಂಡದ ನಾಯಕನಾಗಿದ್ದರು. ಈ ಟೂರ್ನಿಯಲ್ಲಿ ನೀಡಿದ ಪ್ರದರ್ಶನದ ಮೂಲಕ ಯುವರಾಜ್ ಸಿಂಗ್ ಜೊತೆಗೆ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದರು. ತಕ್ಷಣವೇ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದಿದ್ದರು. ನಾಟ್‌ವೆಸ್ಟ್ ಸರಣಿಯಲ್ಲಿ ಮಿಂಚಿದ್ದ ಕೈಫ್ 2002ರ ಚಾಂಪಿಯನ್ಸ್ ಟ್ರೋಫಿಯಲ್ಲೂ ತನ್ನ ಛಾಪು ಮೂಡಿಸಿದ್ದರು. ಉತ್ತರಪ್ರದೇಶದ ಪರ ರಣಜಿ ಟ್ರೋಫಿಯನ್ನು ಜಯಿಸಿರುವ ಕೈಫ್ ಛತ್ತೀಸ್‌ಗಡ ಪರ ಕೊನೆಯ ಬಾರಿ ಪ್ರಥಮ ದರ್ಜೆ ಪಂದ್ಯ ಆಡಿದ್ದರು. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರ ಆಡಿದ್ದರು.

‘‘ನಾನು ಇಂದು ನಿವೃತ್ತಿಯಾಗುತ್ತಿರುವೆ. 16 ವರ್ಷಗಳ ಹಿಂದೆ ಐತಿಹಾಸಿಕ ನಾಟ್‌ವೆಸ್ಟ್ ಟ್ರೋಫಿ ಜಯಿಸಿದಾಗ ಭಾರತ ತಂಡದ ಭಾಗವಾಗಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ನಾನು ಆ ಟೂರ್ನಿಯನ್ನು ಸದಾಕಾಲ ನೆನಪಿನಲ್ಲಿಟ್ಟುಕೊಳ್ಳುವೆ. ಭಾರತದ ಕ್ಯಾಪ್ ಧರಿಸುವ ಅವಕಾಶ ಲಭಿಸಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ನಾನು ಭಾರತದ ಪರ 125 ಏಕದಿನ ಹಾಗೂ 13 ಟೆಸ್ಟ್ ಪಂದ್ಯವನ್ನು ಆಡಿದ್ದೇನೆ’’ ಎಂದು ಕೈಫ್ ಹೇಳಿದ್ದಾರೆ.

ಭಾರತದ ಪರ ಐದು ವರ್ಷಗಳ ಕಾಲ ನಿರಂತರವಾಗಿ ಆಡಿದ್ದ ಕೈಫ್ ತನ್ನ ಚುರುಕಿನ ಫೀಲ್ಡಿಂಗ್‌ನ ಮೂಲಕ ಗಮನ ಸೆಳೆದಿದ್ದರು. ಭಾರತ ಕಂಡ ಅತ್ಯುತ್ತಮ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು. ಸೌರವ್ ಗಂಗುಲಿ ನಾಯಕನಾಗಿದ್ದಾಗ ಯುವರಾಜ್ ಸಿಂಗ್ ಜೊತೆ ಕೈಫ್ ಕೂಡ ಭಾರತದ ಫೀಲ್ಡಿಂಗ್‌ನ ಬೆನ್ನೆಲುಬಾಗಿದ್ದರು. ಓರ್ವ ಫಿಟ್ ಆಟಗಾರನಾಗಿದ್ದ ಕೈಫ್ 125 ಏಕದಿನ ಪಂದ್ಯಗಳಲ್ಲಿ 32ರ ಸರಾಸರಿಯಲ್ಲಿ 2,753 ರನ್ ಗಳಿಸಿದ್ದರು. ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ಕೈಫ್ 2 ಶತಕ ಹಾಗೂ 17 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

13 ಟೆಸ್ಟ್ ಪಂದ್ಯವನ್ನಾಡಿರುವ ಕೈಫ್ 32.01ರ ಸರಾಸರಿಯಲ್ಲಿ 624 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 3 ಅರ್ಧಶತಕವಿದೆ.

  ದೇಶೀಯ ಕ್ರಿಕೆಟ್‌ನಲ್ಲಿ ಉತ್ತರಪ್ರದೇಶ ತಂಡವನ್ನು ಹಲವು ವರ್ಷಗಳ ಕಾಲ ನಾಯಕನಾಗಿ ಮುನ್ನಡೆಸಿದ್ದ ಕೈಫ್ 129 ಪಂದ್ಯಗಳಲ್ಲಿ 15 ಶತಕಗಳ ಸಹಿತ 7,581 ರನ್ ಗಳಿಸಿದ್ದರು. 186 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10,229 ರನ್ ಗಳಿಸಿದ್ದಾರೆ. ಕೈಫ್ ಈಗಾಗಲೇ ಕ್ರಿಕೆಟ್ ವಿಮರ್ಶಕರಾಗಿ ಹಾಗೂ ಹಿಂದಿ ವೀಕ್ಷಕವಿವರಣೆಗಾರರಾಗಿ ಸಾಕಷ್ಟು ಹೆಸರು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News