ಅಥ್ಲೀಟ್ ಹಿಮಾ ದಾಸ್ ಇಂಗ್ಲಿಷ್ ಬಗ್ಗೆ ಟ್ವೀಟ್: ಕ್ಷಮೆ ಕೋರಿದ ಅಥ್ಲೆಟಿಕ್ಸ್ ಫೆಡರೇಶನ್

Update: 2018-07-13 14:46 GMT

ಹೊಸದಿಲ್ಲಿ, ಜು.13: ದೇಶದ ಹೊಸ ಅಥ್ಲೆಟಿಕ್ಸ್ ತಾರೆ ಹಿಮಾ ದಾಸ್ ಅವರ ಇಂಗ್ಲಿಷ್ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್, ಸಾರ್ವಜನಿಕವಾಗಿ ಟೀಕೆಗೆ ಒಳಗಾದ ನಂತರ ಕ್ಷಮೆ ಕೋರಿದೆ. ಫಿನ್‌ಲ್ಯಾಂಡ್‌ನ ತಂಪೆರೆಯಲ್ಲಿ ನಡೆಯುತ್ತಿರುವ ಐಎಎಎಫ್ ವಿಶ್ವ ಅಂಡರ್ 20 ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ನಡೆದ 400 ಮೀ. ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಹಿಮಾ ದಾಸ್ ಇತಿಹಾಸ ಸೃಷ್ಟಿಸಿದ್ದಾರೆ. ಈ ಅಭೂತಪೂರ್ವ ಸಾಧನೆಯ ಬಳಿಕ ಆಕೆ ಸ್ಥಳೀಯ ಮಾಧ್ಯಮಗಳ ಜೊತೆ ಇಂಗ್ಲಿಷ್ ನಲ್ಲಿ ಮಾತನಾಡಿದ್ದರು.

ಈ ಸಂದರ್ಶನಗಳ ವಿಡಿಯೊವನ್ನು ಟ್ವೀಟ್ ಮಾಡಿದ ಅಥ್ಲೆಟಿಕ್ಸ್ ಫೆಡರೇಶನ್, ಇಂಗ್ಲಿಷ್ ನಲ್ಲಿ ಅಷ್ಟೊಂದು ಸರಾಗವಾಗಿಲ್ಲ, ಆದರೂ ಅಲ್ಲೂ ಉತ್ತಮ ನಿರ್ವಹಣೆ ತೋರಿದ್ದಾರೆ ಎಂದು ಬರೆದಿತ್ತು. ಈ ಟ್ವೀಟ್‌ನಿಂದ ಆಕ್ರೋಶಗೊಂಡ ಟ್ವೀಟಿಗರು, ಫೆಡರೇಶನ್ ವಿರುದ್ಧ ಹರಿಹಾಯ್ದಿದ್ದಾರೆ. ಪರಿಣಾಮವಾಗಿ ಅಥ್ಲೆಟಿಕ್ಸ್ ಫೆಡರೇಶನ್ ತನ್ನಿಂದಾಗಿರುವ ಪ್ರಮಾದಕ್ಕೆ ಭಾರತೀಯರ ಕ್ಷಮೆ ಕೇಳಿದೆ. ನಮ್ಮ ಟ್ವೀಟ್‌ನಿಂದ ನೋವಾಗಿದ್ದರೆ ನಾವು ಎಲ್ಲ ಭಾರತೀಯರ ಕ್ಷಮೆ ಕೋರುತ್ತೇವೆ. ಆ ಟ್ವೀಟ್‌ನ ಹಿಂದೆ ಇದ್ದ ಉದ್ದೇಶ ನಮ್ಮ ಅಥ್ಲೀಟ್ ಯಾವುದೇ ಸ್ಥಿತಿಯಲ್ಲೂ ವಿಚಲಿತರಾಗುವುದಿಲ್ಲ ಎನ್ನುವುದಾಗಿತ್ತು. ಸಣ್ಣ ಹಳ್ಳಿಯಿಂದ ಬಂದವರಾಗಿದ್ದರೂ ಆಕೆ ವಿದೇಶಿ ವರದಿಗಾರರ ಜೊತೆ ಯಾವುದೇ ಅಂಜಿಕೆಯಿಲ್ಲದೆ ಇಂಗ್ಲಿಷ್ ನಲ್ಲಿ ಮಾತನಾಡಿದ್ದರು. ನಮ್ಮ ಟ್ವೀಟ್‌ಗಾಗಿ ನಾವು ಮತ್ತೊಮ್ಮೆ ಕ್ಷಮೆ ಕೇಳುತ್ತೇವೆ. ಜೈ ಹಿಂದ್! ಎಂದು ಫೆಡರೇಶನ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News