ಕಸ್ಬಾ ಬೆಂಗರೆ : ರಸ್ತೆಗೆ ಮಣ್ಣು ; ಜನರಿಗೆ ಸಂಕಷ್ಟ
ಮಂಗಳೂರು, ಜು.13: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸ್ಬಾ ಬೆಂಗರೆಯ ರಸ್ತೆಯೊಂದರ ನಿರ್ಮಾಣಕ್ಕೆ ಪಾಲಿಕೆಯ ವತಿಯಿಂದ ಹಾಕಲಾದ ಮಣ್ಣು ಇದೀಗ ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ನಾಲ್ಕೈದು ತಿಂಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಸುಮಾರು 1 ಕಿ.ಮೀ. ಉದ್ದಕ್ಕೆ ಮಣ್ಣು ಹಾಕಲಾಗಿತ್ತು. ಆ ಬಳಿಕ ಸಂಬಂಧಪಟ್ಟವರು ಇತ್ತ ತಲೆ ಹಾಕಲಿಲ್ಲ. ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಈ ರಸ್ತೆಯು ಕೆಸರು ಮಯವಾಗಿದೆ. ಅಲ್ಲದೆ, ಮಳೆನೀರು ಸರಾಗವಾಗಿ ಹರಿದು ಹೋಗಲು ಚರಂಡಿಯ ವ್ಯವಸ್ಥೆಯೂ ಇಲ್ಲದ ಕಾರಣ ಆಸುಪಾಸಿನ 20ಕ್ಕೂ ಅಧಿಕ ಮನೆಯ ಅಂಗಳದಲ್ಲಿ ನೀರು ನಿಂತಿದೆ. ಒಂದಿಬ್ಬರು ಮನೆಯೊಳಗೂ ನೀರು ನುಗ್ಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಮಣ್ಣು ಹಾಕಿದ ಬಳಿಕ ಜಲ್ಲಿ ಹಾಕಿದ್ದರೆ ಅಥವಾ ಡಾಮಾರು ಇಲ್ಲವೇ ಕಾಂಕ್ರಿಟ್ ಹಾಕಿದ್ದರೆ ಈ ಸಮಸ್ಯೆಯಾಗುತ್ತಿರಲಿಲ್ಲ. ಕೇವಲ ಮಣ್ಣು ಹಾಕಿ ಹೋದ ಕಾರಣ ಪರಿಸರ ಕೆಸರುಮಯವಾಗಿದೆ. ಹಿರಿಯರು, ಶಾಲಾ-ಮದ್ರಸ ಮಕ್ಕಳು ಅತ್ತಿತ್ತ ಹೋಗಲಾಗದೆ ಪರಿತಪಿಸುತ್ತಿದ್ದಾರೆ. ಮನಪಾ ಆಡಳಿತವು ಇತ್ತ ಗಮನಹರಿಸಿ ಜನರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಡಿವೈಫ್‌ಐ ಸ್ಥಳೀಯ ಮುಖಂಡ ನೌಶಾದ್ ಬೆಂಗರೆ ಒತ್ತಾಯಿಸಿದ್ದಾರೆ.