ಉಡುಪಿ: ರಾಷ್ಟ್ರಿಯ ವಿಪತ್ತು ನಿರ್ವಹಣಾ ಪಡೆಯ ಜೊತೆ ಸಮಾಲೋಚನೆ
ಉಡುಪಿ, ಜು.13: ಉಡುಪಿ ಜಿಲ್ಲೆಗೆ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡವನ್ನು ಜಮಾಅತೆ ಇಸ್ಲಾಮೀ ಕರ್ನಾಟಕ ರಾಜ್ಯದ ಪ್ರಾಕೃತಿಕ ವಿಕೋಪ ಪರಿಸ್ಥಿತಿಯ ಸೇವಾ ವಿಭಾಗವಾದ ಎಚ್‌ಆರ್‌ಎಸ್ ತಂಡವು ಇತ್ತೀಚೆಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿತು.
ಎನ್‌ಡಿಆರ್‌ಎಫ್‌ನ ಸಹಾಯಕ ಕಮಾಂಡರ್ ಕೇಶವ ಮಾತನಾಡಿ, ಮೂವತ್ತಮೂರು ವರ್ಷಗಳ ನನ್ನ ಸೇವಾವಧಿಯ ಈ ಸೇವೆಯ ಬಗ್ಗೆ ನನಗೆ ಸಂತೃಪ್ತಿ ಇದೆ. ಎಲ್ಲರಲ್ಲೂ ಸೇವಾ ಮನೋಭಾವ ಬೆಳೆದು ಬರಬೇಕು. ಜಾತಿ ಧರ್ಮ ಪಂಗಡವೆಂಬ ಭಾವ ಇರದೆ ಮಾನವೀಯತೆಯಿಂದ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದರು.
ಈ ಸಂದರ್ಭದಲ್ಲಿ ಅವರು ಎಚ್‌ಆರ್‌ಎಸ್ ತಂಡದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು. ಬಳಿಕ ಹಲವು ಸಲಹೆ ಸೂಚನೆಗಳನ್ನು ನೀಡಿ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು. ಎನ್‌ಡಿಆರ್‌ಎಫ್ ಸದಸ್ಯ ಜಾವೇದ್ ತಂಡದ ಸದಸ್ಯರನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಎಚ್‌ಆರ್‌ಎಸ್ ತಂಡದ ರಾಜ್ಯ ಕಾರ್ಯದರ್ಶಿ ಮುಹ ಮ್ಮದ್ ಮರಕಡ, ಕ್ಯಾಪ್ಟನ್ ಅಮೀರ್ ಕುದ್ರೊಳಿ, ತರಬೇತುದಾರರಾದ ಸಲೀಮ್ ಬೊಳಂಗಡಿ, ಮುನವ್ವರ್ ಮಂಗಳೂರು, ಮುನೀರ್ ಪದ್ರೆಂಗಿ ಹಾಗೂ ನಿಸಾರ್ ಉಪ್ಪಿನಕೋಟೆ ಮೊದಲಾದವರು ಉಪಸ್ಥಿತರಿದ್ದರು.