ವಿಟ್ಲ: ರಸ್ತೆಯಲ್ಲಿ ತ್ಯಾಜ್ಯ ಸುರಿದ ಆರೋಪ; ಐವರು ವಶ
ಬಂಟ್ವಾಳ, ಜು. 13: ಕೇರಳದ ಕಸಾಯಿಖಾನೆಗಳಿಂದ ತ್ಯಾಜ್ಯವನ್ನು ತಂದು ನಿರ್ಜನ ಪ್ರದೇಶದ ರಸ್ತೆಗಳಲ್ಲಿ ಸುರಿಯುತ್ತಿದ್ದ ಆರೋಪದ ಮೇರೆಗೆ ಐವರನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪುತ್ತೂರು ವಳಮೊಗರು ಗ್ರಾಮದ ಆಜ್ಜಿಕಲ್ಲು ನಿವಾಸಿ ರಫೀಕ್ (30), ಕೇರಳದ ಕೋಯಿಕ್ಕೋಡ್ ನಿವಾಸಿ ಅಹ್ಮದ್ ಗಜನಿ (34), ಮಲಪರಂಬ ತಿರೂರನ್ನಾಳಿ ನಿವಾಸಿ ಸೌಫಿ (30), ಕೋಝಿಕೋಡ್ ಬೇಪೂರ್ ನಿವಾಸಿ ಮಸೂದ್ (25), ಬಿಹಾರ ಬಾಕಾ ನಿವಾಸಿ ಝಿಯಾವುಲ್ ಅನ್ಸಾರಿ (20) ಬಂಧಿತರು.
ವಿಟ್ಲ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಹಾಕುವ ಬಗ್ಗೆ ಅಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ ಅವರು ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸ್ ತಂಡವು ಇಂದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಸಿ.ಡಿ. ನಾಗರಾಜ್ ಅವರ ನಿರ್ದೇಶನದಂತೆ ವಿಟ್ಲ ಠಾಣೆಯ ಪೊಲೀಸ್ ಸಹಾಯಕ ಉಪನಿರೀಕ್ಷಕರಾದ ದನಂಜಯ, ರವೀಶ್, ಸಿಬ್ಬಂದಿ ಜಯಕುಮಾರ್, ಲೋಕೇಶ್, ಅನುಕುಮಾರ್, ಅಭಿಜಿತ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.