ಸಿರಿಯ: ವಾಯು ದಾಳಿಯಲ್ಲಿ 28 ನಾಗರಿಕರ ಸಾವು

Update: 2018-07-13 16:18 GMT

ಬೈರೂತ್ (ಲೆಬನಾನ್), ಜು. 13: ಉತ್ತರ ಸಿರಿಯದ ದೀರ್ ಇಝರ್ ಪ್ರಾಂತದಲ್ಲಿರುವ ಐಸಿಸ್ ಭಯೋತ್ಪಾದಕ ಗುಂಪಿನ ನೆಲೆಯೊಂದರ ಮೇಲೆ ನಡೆದ ವಾಯು ದಾಳಿಯಲ್ಲಿ 28 ನಾಗರಿಕರು ಮೃತಪಟ್ಟಿದ್ದಾರೆ.

ಇರಾಕ್ ಗಡಿ ಸಮೀಪದ ಅಲ್-ಸೌಸ್ಸಾ ಗ್ರಾಮದಲ್ಲಿರುವ ಮಂಜುಗಡ್ಡೆ ಕಾರ್ಖಾನೆಯೊಂದರಲ್ಲಿ ಕುಳಿತಿದ್ದ ‘ನಾಗರಿಕರ ಗುಂಪೊಂದರ’ ಮೇಲೆ ಗುರುವಾರ ತಡ ರಾತ್ರಿ ದಾಳಿ ನಡೆಯಿತು ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಶುಕ್ರವಾರ ತಿಳಿಸಿದೆ.

ದಾಳಿ ಮಾಡಿದ ವಿಮಾನ ಇರಾಕ್‌ಗೆ ಸೇರಿದ್ದೇ ಅಥವಾ ಐಸಿಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಅಮೆರಿಕ ನೇತೃತ್ವದ ಮಿತ್ರಪಡೆಯದ್ದೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಅದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಇರಾಕ್ ಯುದ್ಧ ವಿಮಾನಗಳು ಪೂರ್ವ ಸಿರಿಯದಲ್ಲಿ ದಾಳಿಗಳನ್ನು ನಡೆಸುತ್ತಿವೆ ಹಾಗೂ ಮಿತ್ರಪಡೆ ವಿಮಾನಗಳು ಐಸಿಸ್ ವಿರುದ್ಧ ಹೋರಾಡುತ್ತಿರುವ ಕುರ್ದಿಶ್ ಬಂಡುಕೋರರಿಗೆ ಬೆಂಬಲ ನೀಡುತ್ತಿವೆ.

30ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯದ ಸರಕಾರಿ ಸುದ್ದಿ ಸಂಸ್ಥೆ ‘ಸನಾ’ ಗುರುವಾರ ರಾತ್ರಿ ವರದಿ ಮಾಡಿದೆ. ಈ ದಾಳಿಯನ್ನು ಅಮೆರಿಕ ನೇತೃತ್ವದ ಮಿತ್ರಪಡೆ ನಡೆಸಿದೆ ಎಂದು ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News